ಧಾರವಾಡ: ಭ್ರಷ್ಟ ಸಚಿವರು ನೈತಿಕತೆ ಹೊತ್ತು ರಾಜೀನಾಮೆ ನೀಡುವಂತೆ ಇಲ್ಲವೇ ಸಚಿವ ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಧಾರವಾಡ ಗ್ರಾಮಾಂತರ ಜಿಲ್ಲಾ ಘಟಕ ಹಾಗೂ ಹು-ಧಾ ಪಶ್ಚಿಮ ಮತಕ್ಷೇತ್ರದ ಘಟಕದಿಂದ ನಗರದ ಡಿಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಳಂಕಿತ ಸಚಿವರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಈರಣ್ಣ ಜಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಮೋಸ ಮಾಡುತ್ತಿದೆ.
ಹುಸಿ ಭರವಸೆಗಳ ಮೂಲಕವೇ ಕಾಲಹರಣ ಮಾಡುತ್ತಿದೆ. ಪ್ರತಿಯೊಂದು ಕಾರ್ಯಗಳು ಕೇವಲ ಗುದ್ದಲಿಪೂಜೆಗೆ ಸಿಮೀತಗೊಂಡಿವೆ. ಸಂಪುಟದ ಸಚಿವರ ಹಣ ಗಳಿಕೆ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆಪಾದಿಸಿದರು. ಸಚಿವರಾದ ಡಿ.ಕೆ. ಶಿವಕುಮಾರ, ರಮೇಶ ಜಾರಕಿಹೊಳಿ ರಾಜ್ಯದ ಜನತೆಗೆ ಮೋಸ ಮಾಡಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ.
ಇಂತಹ ಸಚಿವರಿಂದ ರಾಜ್ಯದ ಅಭಿವೃದ್ಧಿ ಹಾಗೂ ಜನರ ಕಲ್ಯಾಣ ನಿರೀಕ್ಷಿಸುವುದು ಅಸಾಧ್ಯ. ಆದ್ದರಿಂದ ಉಭಯ ಸಚಿವರ ತಕ್ಷಣ ರಾಜೀನಾಮೆ ಪಡೆಯದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ರೈತ ಮೋರ್ಚಾ ಮಹಾನಗರ ಜಿಲ್ಲಾಧ್ಯಕ್ಷ ಅರವಿಂದ ಏಗನಗೌಡರ ಮತ್ತು ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿದರು.
ಯಲ್ಲಪ್ಪ ಅರವಾಳದ, ಪ್ರಧಾನ ಕಾರ್ಯದರ್ಶಿ ಮೋಹನ್ ರಾಮದುರ್ಗ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶರಣು ಅಂಗಡಿ, ಪಾಲಿಕೆ ಸದಸ್ಯರಾದ ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಶಂಕರ ಶೆಳಕೆ, ಪೂರ್ಣಾ ಪಾಟೀಲ, ಶ್ರೀನಿವಾಸ ಕೋಟ್ಯಾನ, ಎಂ.ಆರ್. ಪಾಟೀಲ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.