ದಾವಣಗೆರೆ: ರಾಜೀವ್‌ಗಾಂಧಿ ಆವಾಸ್ ಯೋಜನೆ ಫಲಾನುಭವಿಗಳಿಗೆ ಹಣ ಬಿಡುಗಡೆ, ಕುಡಿಯುವ ನೀರು, ಚರಂಡಿ, ಒಳ ಚರಂಡಿ ಸೌಲಭ್ಯಕ್ಕೆ ಒತ್ತಾಯಿಸಿ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ರಾಜೀವ್‌ಗಾಂಧಿ ಆವಾಸ್ ಯೋಜನೆಯಡಿ ನಗರಪಾಲಿಕೆ 15ನೇ ವಾರ್ಡ್‌ನ ಎಚ್‌ಕೆಆರ್ ನಗರದ 80 ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಸಾಲ ಮಂಜೂರಾಗಿತ್ತು. ಮಹಾನಗರ ಪಾಲಿಕೆ ಸಂಬಂಧಿತ ಫಲಾನುಭವಿಗಳಿಗೆ ಆದೇಶಪತ್ರ ನೀಡಿದ್ದರ ಹಿನ್ನೆಲೆಯಲ್ಲಿ ಜನರು ತರಾತುರಿಯಲ್ಲಿ ಇದ್ದಂತಹ ಮನೆ ಕೆಡವಿ, ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು.
ಸಾಲ ಸೋಲ ಮನೆ ಕಟ್ಟಿಕೊಳ್ಳುತ್ತಿರುವ ಫಲಾನುಭವಿಗಳಿಗೆ ಈವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಸರ್ಕಾರ ಹಣ ನೀಡುತ್ತದೆ ಎಂಬ ಆಸೆಯಿಂದ ಮನೆ ಕಟ್ಟಿಕೊಳ್ಳುತ್ತಿರುವರು ಒಂದು ಕಡೆ ಹಣ ಇಲ್ಲದೆ ಕೆಲಸ ನಿಲ್ಲಿಸುವ ಸ್ಥಿತಿಗೆ ಬಂದಿದ್ದಾರೆ.
ಇನ್ನೊಂದು ಕಡೆ ಇದ್ದ ಮನೆ ಕೆಡವಿಕೊಂಡಿದ್ದಾರೆ. ಹಾಗಾಗಿ 80 ಕುಟುಂಬಕ್ಕೂ ಹೆಚ್ಚು ಜನರು ಅಕ್ಷರಶಃ ಬೀದಿಯಲ್ಲಿದ್ದಾರೆ. ಸಂಬಂಧಿತರು ಕೂಡಲೇ ಹಣ ಬಿಡುಗಡೆ ಮಾಡಿ, ಹಕ್ಕುಪತ್ರ ನೀಡುವ ಮೂಲಕ ಫಲಾನುಭವಿಗಳಿಗೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು.
ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಹುತೇಕ ವಾರ್ಡ್‌ನಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇದೆ. ಸಂಬಂಧಿತರು ಗಮನ ಹರಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು. ಒಳ ಚರಂಡಿ ವ್ಯವಸ್ಥೆ ಸರಿಪಡಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಎನ್. ರಾಜಶೇಖರ್, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್, ರಾಜನಹಳ್ಳಿ ಶಿವಕುಮಾರ್, ಡಿ.ಎಲ್. ರಾಮಚಂದ್ರ ನಾಯ್ಕ, ನವೀನ್‌ಕುಮಾರ್, ಗೌತಮ್ ಜೈನ್, ಧನುಷ್, ಪ್ರತಾಪ್, ನರಸಿಂಹ ಇತರರು ಇದ್ದರು.