Advertisement

ಬಿಜೆಪಿ ಪ್ರತಿಭಟನೆ, ಕಾಂಗ್ರೆಸ್‌ ಶಾಂತಿ ಸಭೆ

02:10 AM Jul 14, 2017 | Team Udayavani |

ಮಹಾನಗರ: ಜಿಲ್ಲೆಯಲ್ಲಿ ನಡೆದ ವಿವಿಧ ಕೊಲೆ, ಕೊಲೆ ಯತ್ನ ಪ್ರಕರಣಗಳನ್ನು ಖಂಡಿಸಿ ಗುರುವಾರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ನಗರದ ಪುರಭವನದಲ್ಲಿ ಬೆಳಗ್ಗೆ ಪ್ರತಿಭಟನಾ ಸಭೆ ನಡೆದರೆ, ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಸಂಜೆ ಶಾಂತಿ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಶರತ್‌ ಕೊಲೆ ಪ್ರಕರಣದಲ್ಲಿ ಆರೋಪಿಗಳು ಇನ್ನೂ ಬಂಧನಕ್ಕೊಳಗಾಗದಿರುವುದನ್ನು ಖಂಡಿಸಿ ಹಾಗೂ ಜಿಲ್ಲೆಯಲ್ಲಿ ಉಂಟಾದ ಅಶಾಂತಿಗೆ ಕಾಂಗ್ರೆಸ್‌ ಆಡಳಿತವೇ ಕಾರಣವೆಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಈ ಪ್ರತಿಭಟನೆ ಜರಗಿತು.

Advertisement

ಬಿಜೆಪಿ ಪಕ್ಷದ ಪ್ರಮುಖ ಮುಖಂಡರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮುಖಂಡರಾದ ಕ್ಯಾ| ಗಣೇಶ್‌ ಕಾರ್ಣಿಕ್‌, ಸುಲೋಚನಾ ಜಿ.ಕೆ. ಭಟ್‌, ಮೀನಾಕ್ಷಿ ಶಾಂತಿಗೋಡು, ಕಸ್ತೂರಿ ಪಂಜ, ಪೂಜಾ ಪೈ, ಉದಯ ಕುಮಾರ್‌ ಶೆಟ್ಟಿ ಮುಂತಾದವರು ಈ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.

ನೂರಕ್ಕೂ ಅಧಿಕ ಪೊಲೀಸರು
ಈ ಕಾರ್ಯಕ್ರಮದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿ ಹಾಗೂ ಗ್ರಾಮಾಂತರ ಭಾಗದ ಸುಮಾರು ನೂರಕ್ಕೂ ಮಿಕ್ಕಿ ಪೊಲೀಸರನ್ನು ಪುರಭವನದ ಸುತ್ತಲೂ ನೇಮಿಸಲಾಗಿತ್ತು. ಅಲ್ಲದೇ, ಪೊಲೀಸರ ವ್ಯಾನ್‌, ಜೀಪ್‌ಗ್ಳು ಕೂಡ ಸ್ಥಳದಲ್ಲಿದ್ದವು. ಪುರಭವನದತ್ತ ಪ್ರವೇಶಿಸುವ ಪ್ರತಿಯೊಬ್ಬರ ಮೇಲೂ ಪೊಲೀಸರು ನಿಗಾ ಇರಿಸುತ್ತಿದ್ದರು. ಡಿಸಿಪಿ ಶಾಂತರಾಜು, ಪಾಂಡೇಶ್ವರ ಇನ್ಸ್‌ಪೆಕ್ಟರ್‌ ಬೆಳ್ಳಿಯಪ್ಪ ಮುಂತಾದ ಅಧಿಕಾರಿಗಳು ಸ್ಥಳದಲ್ಲೇ ಇದ್ದುಕೊಂಡು ಹೆಚ್ಚಿನ ಸುರಕ್ಷತೆ ಒದಗಿಸುತ್ತಿದ್ದರು.

ನಗರದ ಇತರ ಭಾಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಹಾಗೂ ಸುರಕ್ಷೆ ಒದಗಿಸುವ ನಿಟ್ಟಿನಲ್ಲಿ ಪೊಲೀಸ್‌ ಅಧಿಕಾರಿಗಳು ಈ ಸ್ಥಳದಿಂದಲೇ ಸಿಬಂದಿಗೆ ಆದೇಶ ನೀಡಿ ವ್ಯವಸ್ಥೆಗೆ ಕಳುಹಿಸಿಕೊಡುತ್ತಿದ್ದರು. ಕೇವಲ ಪುರಭವನ ಮಾತ್ರವಲ್ಲದೇ, ನಗರದ ವಿವಿಧೆಡೆ ಅಲ್ಲಲ್ಲಿ ಪೊಲೀಸ್‌ ಸಿಬಂದಿಯನ್ನು ನೇಮಿಸಲಾಗಿತ್ತು. ಪ್ರತಿಭಟನೆ ನಡೆಸಲು ಜಿಲ್ಲಾಧಿಕಾರಿ ಕಚೇರಿ ಆವರಣ, ನೆಹರೂ ಮೈದಾನದ‌ಲ್ಲಿ ಅನುಮತಿ ನೀಡದಿರುವ ಹಿನ್ನೆಲೆಯಲ್ಲಿ ನಗರದ ಪುರಭವನದಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು.

ಕಾಂಗ್ರೆಸ್‌ನಿಂದ ಶಾಂತಿ ಸಭೆ
ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಲಾದ ಶಾಂತಿ ಸಭೆಯಲ್ಲಿ ಸಚಿವರಾದ ಬಿ. ರಮಾನಾಥ ರೈ, ಯು.ಟಿ. ಖಾದರ್‌, ಶಾಸಕ ಅಭಯ ಚಂದ್ರ ಜೈನ್‌, ಮೇಯರ್‌ ಕವಿತಾ ಸನಿಲ್‌, ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್‌, ಅಪರ ಜಿಲ್ಲಾಧಿಕಾರಿ ಕುಮಾರ್‌, ಐಜಿಪಿ ಹರಿಶೇಖರನ್‌, ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಎಸ್ಪಿ ಸುಧೀರ್‌ ಕುಮಾರ್‌ ರೆಡ್ಡಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಕಚೇರಿ ಹೊರಭಾಗದಲ್ಲಿ ಮಾತ್ರವಲ್ಲದೇ, ಕಚೇರಿಗೆ ಪ್ರವೇಶಿಸುವ ದ್ವಾರದಲ್ಲೂ ಸೂಕ್ತ ಪೊಲೀಸ್‌ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ, ಸ್ಟೇಟ್‌ಬ್ಯಾಂಕ್‌ ವ್ಯಾಪ್ತಿಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next