ಕಾರವಾರ: ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬಳನ್ನು ವಿವಸ್ತ್ರಗೊಳಿಸಿ ಹಲ್ಲೆಗೈದಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ವತಿಯಿಂದ ನಗರದ ಸುಭಾಷ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಆಗ್ರಹಿಸಿತು.
ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆಡಳಿತ ನಡೆಸಲು ಬಾರದೆ ಕೇವಲ ಓಲೈಕೆ ಮಾಡುವ ಕಾಂಗ್ರೆಸ್ ಸರ್ಕಾರ ಈ ನಾಡು ಕಂಡ ಅತ್ಯಂತ ದುರ್ಬಲ ಸರ್ಕಾರ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ ಆರೋಪಿಸಿದರು.
‘ಅಧಿವೇಶನದ ನಡೆಯುತ್ತಿದ್ದ ಬೆಳಗಾವಿಯಲ್ಲಿ ಇಡೀ ಸರ್ಕಾರ ಇರುವ ಸಮಯದಲ್ಲೇ ಮಹಿಳೆಯೊಬ್ಬರ ಮೇಲೆ ನಡೆದ ಪೈಶಾಚಿಕ ಘಟನೆ ಸರ್ಕಾರದ ಅಸಮರ್ಥತೆ ಎತ್ತಿಹಿಡಿದಿದೆ. ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಘಟನೆಯೂ ಸರ್ಕಾರದ ದೌರ್ಬಲ್ಯತೆಗೆ ಸಾಕ್ಷಿ. ಕೂಡಲೆ ಮುಖ್ಯಮಂತ್ರಿ ಸಂಬಂಧಪಟ್ಟ ಸಚಿವರ ರಾಜೀನಾಮೆ ಪಡೆಯಬೇಕು ಇಲ್ಲವೇ ಸಂಪುಟದಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಮಹಿಳೆಯರಿಗೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ ಮಹಿಳೆಯರ ಸುರಕ್ಷತೆಗೆ ಗ್ಯಾರಂಟಿ ನೀಡುತ್ತಿಲ್ಲ ಎಂದರು.
ನಗರಸಭಾ ಸದಸ್ಯೆ ಮಾಲಾ ಹುಲಸ್ವಾರ, ಸುಜಾತಾ ಬಾಂದೇಕರ್, ವೃಂದಾ ದಾಮ್ಸಡೇಕರ್, ರೇಷ್ಮಾ ಮಾಳ್ಸೇಕರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗೇಶ ಕುರ್ಡೇಕರ್, ಇತರರು ಪ್ರತಿಭಟನೆ ಯಲ್ಲಿದ್ದರು.
ಇದನ್ನೂ ಓದಿ: Raghav Chadha: ರಾಜ್ಯಸಭಾ ನಾಯಕನಾಗಿ ಆಪ್ ಸಂಸದ ರಾಘವ್ ಚಡ್ಡಾ ನೇಮಕ