ಚಾಮರಾಜನಗರ: ರಾಜ್ಯ ಸರ್ಕಾರ ಅಬಕಾರಿ ಸುಂಕ ಹೆಚ್ಚಿಸಿಕೊಳ್ಳಲು ಮದ್ಯದಂಗಡಿಗಳಿಗೆ ಪರವಾನಗಿ ನೀಡುತ್ತಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಮಹಿಳಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರದ ಸಂತೇಮರಹಳ್ಳಿ ವೃತ್ತದ ಬಳಿ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ಅಣಕು ಶವಯಾತ್ರೆ ನಡೆಸಲಾಯಿತು.
ರಾಜ್ಯ ಸರ್ಕಾರ ಅಬಕಾರಿ ಸುಂಕ ಹೆಚ್ಚಿಸಿಕೊಳ್ಳಲು ವೈನ್‌ಸ್ಟೋರ್‌ಗಳ ಪರವಾನಗಿ ನೀಡಲು ಮುಂದಾಗಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ಹಾಗೂ ಮಹಿಳಾ ಮೋರ್ಚಾದ ವತಿಯಿಂದ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಶವಯಾತ್ರೆ: ನಗರದ ಸಂತೇಮರಹಳ್ಳಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಸಂತೇಮರಹಳ್ಳಿ ವೃತ್ತದಿಂದ ಮರಹಳ್ಳಿ ರಸ್ತೆಯ ಕಟ್ಟೆ ಹಳ್ಳದವರೆಗೆ ಅಣಕು ಶವಯಾತ್ರೆ ನಡೆಸಿದರು. ಬಳಿಕ ಶವದ ಪ್ರತಿಕೃತಿಯನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದರು.
ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ರಾಜ್ಯ ಸರ್ಕಾರ ಘೋಷಣೆ ಮಾಡಿರುವ 5 ಗ್ಯಾರಂಟಿಗಳಿಗೆ ಹಣಕಾಸು ಒದಗಿಸಿಕೊಳ್ಳಲು ಈ ಯೋಜನೆ ಮಾಡಿದೆ. ಕಳೆದ ವರ್ಷ 23 ಸಾವಿರ ಕೋಟಿ ಅಬಕಾರಿ ಆದಾಯ ಇತ್ತು. ಇದನ್ನು 40 ಸಾವಿರ ಕೋಟಿಗೆ ಏರಿಕೆ ಮಾಡಲು ಸಾವಿರ ಜನಸಂಖ್ಯೆ ಇರುವ ಹಳ್ಳಿಗೆ ಒಂದು ಮದ್ಯದಂಗಡಿ ತೆರೆಯಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಇದು ಅಪಾಯಕಾರಿ. ಹೆಣ್ಣು ಮಕ್ಕಳ ತಾಳಿ ಭಾಗ್ಯ ಉಳಿಸುವ ಕಾರ್ಯ ಮಾಡಲಾಗುವುದು ಎಂದರು.
ಅಣಕು ಶವಯಾತ್ರೆಗೆ ತಡೆಯೊಡ್ಡಿದ ಪೊಲೀಸರು: ರಾಜ್ಯ ಸರ್ಕಾರದ ಅಣಕು ಶವಯಾತ್ರೆ ಮಾಡಲು ಮುಂದಾದ ಬಿಜೆಪಿ ನಾಯಕರಿಂದ ಪೊಲೀಸರು ಅಣಕು ಶವ ಕಸಿದುಕೊಂಡರು. ಆಕ್ರೋಶಗೊಂಡ ನಾಯಕರು, ಹೆದ್ದಾರಿಯಲ್ಲಿಯೇ ನಿಂತು ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಪೊಲೀಸರು ಪ್ರತಿಭಟನಾಕಾರರಿಗೆ ಅಣಕು ಶವ ನೀಡಿದರು. ಬಳಿಕ ಅಣಕು ಶವಯಾತ್ರೆ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್ .ಬಾಲರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್, ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್, ನಗರಸಭಾ ಸದಸ್ಯೆ ಮಮತಾ, ಮುಖಂಡರಾದ ಶಿವು ವಿರಾಟ್, ರಾಜು ಇತರರು ಉಪಸ್ಥಿತರಿದ್ದರು.