ಬೆಂಗಳೂರು: ಸರ್ಕಾರದ ಶೋಕಾಚರಣೆ ನಡುವೆಯೂ “ಸಂವಿಧಾನದ ಸಂಭಾಷಣೆ’ಗಳು ಕಾರ್ಯಕ್ರಮ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಶುಕ್ರವಾರ ಪ್ರತಿಭಟನೆಗೆ ಕರೆ ನೀಡಿದರೂ ರಾಜಧಾನಿಯಲ್ಲಿ ಪ್ರತಿಭಟನೆ ನಡೆಯಲೇ ಇಲ್ಲ. ದಿಢೀರ್ ಕರೆ ನೀಡಿದ ಪ್ರತಿಭಟನೆ ಕೆಲ ಜಿಲ್ಲೆಗಷ್ಟೇ ಸೀಮಿತವಾದಂತಿತ್ತು.
ದಿಢೀರ್ ಪ್ರತಿಭಟನೆಗೆ ಕರೆ ನೀಡಿ ನಂತರ ಧರಣಿ ನಡೆಸದಿರುವ ಬಗ್ಗೆ ಪಕ್ಷದ ನಾಯಕರಲ್ಲೇ ಬೇಸರ ವ್ಯಕ್ತವಾಗಿದೆ. ಪೂರ್ವ ಸಿದ್ಧತೆ ಹಾಗೂ ಸಂವಹನದ ಕೊರತೆಯಿಂದಾಗಿ ಪ್ರತಿಭಟನೆ, ಧರಣಿ ನಿರೀಕ್ಷೆಯಂತೆ ನಡೆಯದಿರುವ ಬಗ್ಗೆಯೂ ಅಪಸ್ವರ ಕೇಳಿ ಬಂದಿದೆ.
ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸರ್ಕಾರ ಮೂರು ದಿನ ಶೋಕಾಚರಣೆ ಘೋಷಿಸಿತ್ತು. ಹಾಗಿದ್ದರೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ “ಸಂವಿಧಾನ ಸಂಭಾಷಣೆ’ ಕಾರ್ಯಕ್ರಮವನ್ನು ನಡೆಸಿದ್ದ ಬಗ್ಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಸಚಿವರ ಧೋರಣೆ ಖಂಡಿಸಿ ಶುಕ್ರವಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು. ಅದರಂತೆ ಕೆಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ. ಆದರೆ ಬೆಂಗಳೂರಿನಲ್ಲಿ ಶುಕ್ರವಾರ ಬಿಜೆಪಿಯಿಂದ ಯಾವುದೇ ಪ್ರತಿಭಟನೆ ನಡೆಯಲಿಲ್ಲ. ನಗರದಲ್ಲಿ 10 ಬಿಜೆಪಿ ಶಾಸಕರು, ಪಾಲಿಕೆಯಲ್ಲಿ 100 ಸದಸ್ಯರಿದ್ದರೂ ಧರಣಿ ನಡೆಯಲಿಲ್ಲ. ಪ್ರತಿಭಟನೆಗೆ ಕರೆ ನೀಡಿರುವ ಬಗ್ಗೆ ಹಲವರಿಗೆ ಮಾಹಿತಿಯೇ ಇರಲಿಲ್ಲ. ಹೀಗಾಗಿ ಶುಕ್ರವಾರ ರಾಜಧಾನಿಯಲ್ಲಿ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ. ಗಣರಾಜ್ಯೋತ್ಸವ ದಿನದ ಹಿನ್ನೆಲೆಯಲ್ಲಿ ಸಿದಟಛಿತಾ ಕಾರ್ಯದಲ್ಲಿ ನಿರತರಾಗಿದ್ದೆವು. ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್.ಸದಾಶಿವ ತಿಳಿಸಿದರು.
ಇದೇ ಮೊದಲಲ್ಲ: ಈ ಹಿಂದೆ ಸಚಿವ ಪುಟ್ಟರಂಗಶೆಟ್ಟಿಯವರ ಆಪ್ತ ಸಹಾಯಕ ಮೋಹನ್ ಕುಮಾರ್ ಬಳಿ 25 ಲಕ್ಷ ರೂ.ಹಣ ಪತ್ತೆಯಾದ ಪ್ರಕರಣದಲ್ಲಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿತ್ತು. ಆ ಪ್ರತಿಭಟನೆ ಕೂಡ ನಗರದಲ್ಲಿ ನಡೆಯಲಿಲ್ಲ. ಇದು ಸಹ ಪಕ್ಷದ ಹಲವು ನಾಯಕರಿಗೆ ಮುಜುಗರ ತಂದಿತ್ತು.