ನವದೆಹಲಿ/ಹೈದರಾಬಾದ್: ಒಂಬತ್ತು ರಾಜ್ಯಗಳು ಮತ್ತು ಒಂಬತ್ತು ಪತ್ರಿಕಾಗೋಷ್ಠಿ… ತನಿಖಾಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ಬಿಜೆಪಿ ಸಿದ್ಧಪಡಿಸಿರುವ ಯೋಜನೆಯಿದು. ಆಪ್, ಎನ್‌ಸಿಪಿ ಸೇರಿದಂತೆ ಒಂಬತ್ತು ಪ್ರತಿಪಕ್ಷಗಳ ಮುಖಂಡರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು.
ಅದಕ್ಕೆ ತಿರುಗೇಟು ನೀಡಲು ಬಿಜೆಪಿ ಚಿಂತನೆ ನಡೆಸಿದ್ದು, ಆಯಾ ಪಕ್ಷಗಳು ಪ್ರಧಾನವಾಗಿ ಕಾರ್ಯವೆಸಗುವ ರಾಜ್ಯಗಳ ರಾಜಧಾನಿಗಳನ್ನು ಆಯ್ಕೆ ಮಾಡಿಕೊಂಡಿದೆ.
ನವದೆಹಲಿ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕೇರಳ ರಾಜಧಾನಿಗಳಲ್ಲಿ ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿ ಪ್ರತಿಪಕ್ಷಗಳ ಮುಖಂಡರು ಪ್ರಧಾನಿಯವರಿಗೆ ಬರೆದ ಪತ್ರಕ್ಕೆ ತಿರುಗೇಟು ನೀಡುವ ಕಾರ್ಯ ಯೋಜನೆ ಹಮ್ಮಿಕೊಂಡಿದ್ದಾರೆ. ಈ ಮೂಲಕ ಪ್ರತಿಪಕ್ಷಗಳಲ್ಲಿನ ಕೆಲವು ನಾಯಕರು ಗುರುತರ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದಾರೆ. ತನಿಖೆಗೆ ಅಂಜಿಕೊಂಡು ಅವರು ದುರುಪಯೋಗದ ನೆಪದಿಂದ ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ ಎಂಬ ಅಂಶಗಳನ್ನು ಬಿಜೆಪಿ ನಾಯಕರು ಸುದ್ದಿಗೋಷ್ಠಿಯಲ್ಲಿ ಪ್ರಧಾನವಾಗಿ ಪ್ರಸ್ತಾಪ ಮಾಡುವ ಸಾಧ್ಯತೆಗಳು ಇವೆ.
ಅದಕ್ಕಾಗಿ ಮುಖಂಡರನ್ನೂ ಪಕ್ಷ ನಿಯೋಜನೆ ಮಾಡಿದೆ. ಪಶ್ಚಿಮ ಬಂಗಾಳಕ್ಕೆ ಸುವೇಂದು ಅಧಿಕಾರಿ, ಬಿಹಾರದಲ್ಲಿ ಸಂಜಯ ಜೈಸ್ವಾಲ್, ಉತ್ತರ ಪ್ರದೇಶದಲ್ಲಿ ಬ್ರಿಜೇಶ್ ಪಾಠಕ್, ಬಂಡಿ ಸಂಜಯ ಕುಮಾರ್ ಅವರನ್ನು ತೆಲಂಗಾಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲು ನಿಯೋಜಿಸಲಾಗಿದೆ.