ಬೆಂಗಳೂರು: ಆಪರೇಷನ್ ಕಮಲ ನಡೆಸಲು ಯತ್ನಿಸುತ್ತಿದೆ ಎನ್ನುವ ಆರೋಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದ ವಿಚಾರ ಎತ್ತಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿ ಸಮರ ಸಾರಿದ್ದು , ಗುರುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ನಾಯಕರು ಹಲವು ಆರೋಪಗಳನ್ನು ನೆನಪಿಸಿ ಕೊಟ್ಟಿದ್ದಾರೆ.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಯಕರಾದ ಆರ್.ಅಶೋಕ್, ಬಿ.ಜೆ.ಪುಟ್ಟಸ್ವಾಮಿ, ಗೋವಿಂದ ಕಾರಜೋಳ ಮತ್ತು ಇತರ ಮುಖಂಡರು ಮುಖ್ಯಮಂತ್ರಿ ಎಚ್‌ಡಿಕೆ ಅವರ ವಿರುದ್ಧ ಕಿಡಿ ಕಾರಿದರು.
ಚಿತ್ರದುರ್ಗದಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಅವಕಾಶ ನೀಡಿದ ಪ್ರಕರಣದಲ್ಲಿ ಎಚ್‌ಡಿಕೆ ಜಾಮೀನು ಪಡೆದಿದ್ದಾರೆ. ಅದಿರು ಕಳ್ಳಸಾಗಾಣಿಕೆಗೆ ಭೂಗತ ಪಾತಕಿಯೊಂದಿಗೆ ನಂಟು ಹೊಂದಿದ್ದಾರೆ. ಥಣಿಸಂದ್ರ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ. 460 ಹೆಕ್ಟೇರ್ ಪ್ರದೇಶದಲ್ಲಿ ಆಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನು ಪಡೆದಿದ್ದಾರೆ. ಹಲವು ಆರೋಪಗಳು ಕುಮಾರಸ್ವಾಮಿ ಅವರ ಮೇಲಿದೆ ಎಂದು ನೆನಪಿಸಿ ಕೊಟ್ಟರು.
ಮಾಜಿ ಸಚಿವ ಕಾಂಗ್ರೆಸ್ ನಾಯಕ ಎ ಮಂಜು ಆರೋಪಿಸಿರುವಂತೆ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ಭೂ ಕಬಳಿಕೆ ಮಾಡಿರುವುದು ನಿಜ. 54 ಎಕರೆ ಭೂಮಿ ಪ್ರಜ್ವಲ್ ಹೆಸರಲ್ಲಿ ರಿಜಿಸ್ಟ್ರಾರ್ ಆಗಿದೆ ಎಂದು ಹೇಳಿದರು.
ಸಿಎಂ ದಂಗೆ ಏಳಲು ಕರೆ ನೀಡಿದ್ದಾರೆ. ಈ ಕುರಿತು ಪೊಲೀಸರು ತಕ್ಷಣ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು.ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.
ರಾಮನಗರದ ಕ್ಯಾತಗಾನಹಳ್ಳಿಯಲ್ಲಿ ಎಸ್‌ಸಿ/ಎಸ್‌ಟಿಗೆ ಮೀಸಲಾಗಿದ್ದ 46 ಎಕರೆ ಭೂಮಿಯನ್ನು ಎಚ್‌ಡಿಕೆ ಕುಟುಂಬ ಕಬಳಿಸಿದೆ.
ಇಂದು ಕಾಂಗ್ರೆಸ್‌ನ ಕೆಲ ಗೂಂಡಾಗಳು ಯಡಿಯೂರಪ್ಪ ಅವರ ಮನೆಗೆ ನುಗ್ಗಿ ಅವರ ಪ್ರಾಣ ತೆಗೆಯಲು ಮುಂದಾಗಿದ್ದರು.ಇದು ಸರ್ಕಾರದ ಪ್ರೇರಣೆಯಿಂದ ನಡೆದಿದೆ ಎಂದು ಆರೋಪಿಸಿದರು.
ಬಿಜೆಪಿ ಆಪರೇಷನ್ ಕಮಲಕ್ಕೆ ಯಾವುದೇ ಯತ್ನ ಮಾಡಿಲ್ಲ. ನಾವು ಯಾರನ್ನೂ ಕರೆದಿಲ್ಲ. ಕಾಂಗ್ರೆಸ್ ಶಾಸಕರೇ ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂದರು.