Advertisement

ರಾಜ್ಯಸಭೆಯಲ್ಲಿ ಶಾ ವಾಗ್ಝರಿ

08:45 AM Feb 06, 2018 | Team Udayavani |

ಹೊಸದಿಲ್ಲಿ: ನಿರುದ್ಯೋಗಿಯಾಗಿರುವುದಕ್ಕಿಂತ ಚಹಾ ಮತ್ತು ಪಕೋಡಾ ಮಾರಿಕೊಂಡಿರುವುದೇ ಲೇಸು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ರಾಜ್ಯಸಭೆ ಸದಸ್ಯರಾದ ಬಳಿಕ ಅವರು ಮೊದಲ ಬಾರಿಗೆ ಸೋಮವಾರ ಸದನದಲ್ಲಿ ಮಾತನಾಡಿದರು. 90 ನಿಮಿಷಗಳ ಕಾಲ ಮಾತನಾಡಿದ ಅವರು ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ, ಕಾಂಗ್ರೆಸ್‌ ನಾಯಕತ್ವದ ವಿರುದ್ಧ ವಾಗ್ಧಾಳಿ ನಡೆಸಿದರು. ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಬಿಜೆಪಿ ಅಧ್ಯಕ್ಷರ ಮಾತಿಗೆ ತಿರುಗೇಟು ನೀಡಿ “ನೀವು ರಿಪ್ಯಾಕೇಜಿಂಗ್‌ ಮಾಡುವಲ್ಲಿ ನಿಸ್ಸೀಮರು’ ಎಂದು ಕುಟುಕಿದರು. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸೂಚಿಸುವ ಗೊತ್ತುವಳಿ ಮೇಲೆ  ಬಿರುಸಿನ ಚರ್ಚೆ ನಡೆಯಿತು. 

Advertisement

ದ್ವಿಗುಣಗೊಂಡಿದೆ ಬಿ.ಟಿ.ಹತ್ತಿ ಬೆಳೆ: ದೇಶದಲ್ಲಿ ಬಿಟಿ ಹತ್ತಿ ಬೆಳೆಯನ್ನು 2002ರಲ್ಲಿ ಪರಿಚಯಿಸಿದ ಬಳಿಕ ಅದು ದ್ವಿಗುಣವಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಹೈಬ್ರಿಡ್‌ ಮಾದರಿ ಬೆಳೆ ಕೀಟಗಳಿಂದ ಉಂಟಾಗುವ ಹಾನಿಯನ್ನು ತಗ್ಗಿಸಿದೆ ಎಂದು ಸಚಿವ ಮಹೇಶ್‌ ಶರ್ಮಾ ರಾಜ್ಯಸಭೆಗೆ ತಿಳಿಸಿದ್ದಾರೆ. ಕುಲಾಂತರಿ ಸಾಸಿವೆಯನ್ನು ವಾಣಿಜ್ಯಿಕವಾಗಿ ಬೆಳೆಯಲು ಅನುಮತಿ ನೀಡಬಹುದು ಎಂದು ಕುಲಾಂತರಿ ತಂತ್ರಜ್ಞಾನ ಅಂದಾಜು ಸಮಿತಿ (ಜಿಇಎಸಿ) ಸರಕಾರಕ್ಕೆ ವರದಿ ನೀಡಿರುವ ಬೆನ್ನಲ್ಲೇ ಸರಕಾರ ಈ ಹೇಳಿಕೆ ನೀಡಿದೆ. 2001-02ರಲ್ಲಿ 158 ಲಕ್ಷ ಬೇಲ್‌ ಇದ್ದ ಹತ್ತಿ ಬೆಳೆಯ ಪ್ರಮಾಣ 2016-17ನೇ ಸಾಲಿನಲ್ಲಿ ಪ್ರತಿ ಹೆಕ್ಟೇರ್‌ಗೆ 569 ಕೆಜಿಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಇಂದು ರಾತ್ರಿ 8 ಗಂಟೆ ವರೆಗೆ ಕಲಾಪ: ತ್ರಿವಳಿ ತಲಾಖ್‌ ಸೇರಿ ಪ್ರಮುಖ ಮಸೂದೆಗಳು ಮೇಲ್ಮನೆಯಲ್ಲಿ ಚರ್ಚೆ ಯಾಗಿ ಅಂಗೀಕಾರಗೊಳ್ಳಬೇಕಾಗಿರುವುದರಿಂದ ಮತ್ತು ರಾಷ್ಟ್ರಪತಿ ಭಾಷಣದ ಮೇಲೆ ಚರ್ಚೆಯಾಗಿ ಅದಕ್ಕೆ ಧನ್ಯವಾದ ಸಮರ್ಪಿಸಬೇಕಾಗಿರುವುದರಿಂದ ಮಂಗಳವಾರ ರಾತ್ರಿ 8 ಗಂಟೆಯ ವರೆಗೆ ಕಲಾಪ ನಡೆಯಲಿದೆ. 

ಆಕ್ಷೇಪಾರ್ಹ ಪದ ಬಳಕೆ: ಆಂಧ್ರದ ಬಗ್ಗೆ ಕೇಂದ್ರ ಸರಕಾರದ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟಿಸುತ್ತಿದ್ದ ಆಂಧ್ರದ ಕಾಂಗ್ರೆಸ್‌ ಸದಸ್ಯ ಕೆವಿಪಿ ರಾಮಚಂದ್ರ ರಾವ್‌ ವಿರುದ್ಧ ಸಭಾಪತಿ ಪಿ.ಜೆ.ಕುರಿಯನ್‌ಅವಹೇಳನಕಾರಿ ಪದ ಬಳಕೆ ಮಾಡಿದ್ದು ನಂತರ ಅದನ್ನು ಕಡತದಿಂದ ತೆಗೆದುಹಾಕಲಾಯಿತು.

ಅಮಿತ್‌ ಶಾ ಹೇಳಿದ್ದು
– ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲ ಎಂದು ಹೇಳು ತ್ತಿಲ್ಲ. ಕಾಂಗ್ರೆಸ್‌ 60 ವರ್ಷಗಳ ಕಾಲ ಆಡಳಿತ ನಡೆಸಿದೆ. “ಗರೀಬಿ ಹಟಾವೋ’ ಎಂಬ ಘೋಷಣೆಯಿಂದ ಅಧಿಕಾರಕ್ಕೆ ಬಂದಿದ್ದ ನೀವು ಮಾಡಿದ್ದಾದರೂ ಏನು?

Advertisement

– ಪಕೋಡಾ ಬಗ್ಗೆ ಮಾಜಿ ಸಚಿವ ಚಿದಂಬರಂ ಟ್ವೀಟ್‌ ಓದಿದ್ದೇನೆ. ನಿರುದ್ಯೋಗಿಯಾಗಿ ಇರುವುದಕ್ಕಿಂತ ಪಕೋಡಾ- ಚಹಾ ಮಾರುವುದೇ ಉತ್ತಮ. ಭಿಕ್ಷುಕ ಮತ್ತು ಪಕೋಡಾ ಮಾರುವವನಿಗೆ ಹೋಲಿಸುವುದು ಎಂಥಾ ಮನಸ್ಥಿತಿ?

– ಪಾಕ್‌ ಯುದ್ಧದ ವೇಳೆ ಲಾಲ್‌ ಬಹದ್ದೂರ್‌ ಶಾಸಿŒ ಅವರು ಒಂದು ದಿನ ಉಪವಾಸ ಮಾಡಿ ಎಂದು ಕೇಳಿಕೊಂಡಾಗ ದೇಶ ಅದಕ್ಕೆ ಒಪ್ಪಿತ್ತು. ಅಂತೆಯೇ ಈಗ ಪ್ರಧಾನಿ ಮೋದಿಯವರು, ಬಡವರಿಗೆ ನೆರವಾಗಲು  ಅನುಕೂಲ ಇರುವವರು ಎಲ್‌ಪಿಜಿ ಸಬ್ಸಿಡಿ ಬಿಡಿ ಎಂದು ಮನವಿ ಮಾಡಿಕೊಂಡಿದ್ದು, ಅದಕ್ಕೆ ಸಾಕಷ್ಟು ಮಂದಿ ಒಪ್ಪಿ ಸಬ್ಸಿಡಿ ತ್ಯಾಗ ಮಾಡಿದ್ದಾರೆ.

– ಹಿಂದಿನ ಸರಕಾರಗಳ ಯೋಜನೆಗಳೆಲ್ಲ ದಾಖಲೆಗಳಲ್ಲಿ ಮಾತ್ರ ಪೂರ್ತಿ ಯಾಗಿದ್ದವು. ಲ್ಯೂಟೆನ್ಸ್‌ ಪ್ರದೇಶದಲ್ಲಿರುವವರಿಗೆ ಶೌಚಾಲಯದ ಮಹತ್ವ ಎಲ್ಲಿ ಅರಿವಾಗಬೇಕು? ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣವಾಗಿದೆ.

– ಹಿಂದಿನ 35 ವರ್ಷಗಳಿಗೆ ಹೋಲಿಸಿದರೆ ಜಮ್ಮು – ಕಾಶ್ಮೀರದಲ್ಲಿ ಈಗ ಪರಿಸ್ಥಿತಿ ಉತ್ತಮವಾಗಿದೆ. ಭಯೋತ್ಪಾದಕರು ಜೈಲುಪಾಲಾಗಿದ್ದಾರೆ.

– ಒಂದು ದೇಶ ಒಂದು ತೆರಿಗೆ ಸೂತ್ರದ ಅಡಿ ಜಿಎಸ್‌ಟಿ ಜಾರಿಗೆ ತರಲಾಗಿದೆ. ಇಲ್ಲೇನು ಗಬ್ಬರ್‌ ಸಿಂಗ್‌ ಡಕಾಯಿತಿ ನಡೆಸುತ್ತಿದ್ದಂತೆ ಪರಿಸ್ಥಿತಿ ಇದೆಯೇ?

– ತಲಾಖ್‌ ಪದ್ಧತಿಯನ್ನು ನಮ್ಮ ಸರಕಾರ ವಿರೋಧಿಸುತ್ತದೆ. ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿಯೇ ತ್ರಿವಳಿ ತಲಾಖ್‌ ನಿಷೇಧ ಮಸೂದೆ ಮಂಡಿಸಿದ್ದೇವೆ. ಪ್ರತಿಪಕ್ಷಗಳು ಒಪ್ಪಿದರೆ ನಾಳೆಯೇ ರಾಜ್ಯಸಭೆಯಲ್ಲಿ ಅದನ್ನು ಮಂಡಿಸುತ್ತೇವೆ.

– ಅಮೆರಿಕ, ಇಸ್ರೇಲ್‌ ಬಳಿಕ ಭಾರತವೇ ತನ್ನ ದೇಶದ ಸೈನಿಕರ ರಕ್ಷಣೆಗಾಗಿ ಯಾವ ಮಟ್ಟಕ್ಕೂ ಇಳಿಯಲಿದೆ ಎನ್ನುವುದನ್ನು ಸರ್ಜಿಕಲ್‌ ದಾಳಿಯ ಮೂಲಕ ತೋರಿಸಿಕೊಟ್ಟಿದ್ದೇವೆ. ಸಮಾನ ಹುದ್ದೆ, ಸಮಾನ ಪಿಂಚಣಿ ಯೋಜನೆ ಜಾರಿಗೆ ಹಾಲಿ ಸರಕಾರ 100 ಕೋಟಿ ರೂ. ತೆಗೆದಿರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next