Advertisement

PM ರಿಲೀಫ್ ಫ‌ಂಡ್‌ನಿಂದ ರಾಜೀವ್‌ ಪ್ರತಿಷ್ಠಾನಕ್ಕೆ ದೇಣಿಗೆ: ಕೈ ವಿರುದ್ಧ ನಡ್ಡಾ ಆರೋಪ

03:03 AM Jun 27, 2020 | Hari Prasad |

ಹೊಸದಿಲ್ಲಿ: ಭಾರತ ಚೀನಕ್ಕೆ ಶರಣಾಗುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್‌ ವಿರುದ್ದ ಸರಣಿ ಆರೋಪಗಳನ್ನು ಮಾಡಿದೆ.

Advertisement

ಈ ಸಂಬಂಧ ಟ್ವೀಟ್‌ ಮಾಡಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ‘ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ರಾಜೀವ್‌ಗಾಂಧಿ ಪ್ರತಿ­ಷ್ಠಾನಕ್ಕೆ (ಆರ್‌ಜಿಎಫ್) ಪ್ರಧಾ­ನ­ಮಂತ್ರಿ­ಯವರ ಪರಿಹಾರ ನಿಧಿಯಿಂದ ದೇಣಿಗೆ ನೀಡಲಾ­ಗಿದೆ. ಇದೊಂದು ಲಜ್ಜೆಗೆಟ್ಟ ವಂಚ­ನೆಯಾ­ಗಿದೆ” ಎಂದು ಆರೋಪಿ­ಸಿದ್ದಾರೆ. ಅಲ್ಲದೆ, ಈ ಕುರಿತಾದ ದಾಖಲೆ ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ­ಯವರು ಪ್ರತಿಷ್ಠಾನದ ಮುಖ್ಯಸ್ಥರಾಗಿದ್ದರೆ, ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ, ಪಿ.ಚಿದಂಬರಂ ಮತ್ತು ಮನಮೋಹನ್‌ ಸಿಂಗ್‌ ಅವರು ಅದರ ಸದಸ್ಯರು. ಇದೇ ವೇಳೆ, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದ ಪ್ರಸ್ತಾವಿಸಿರುವ ಅವರು, ಒಪ್ಪಂದಕ್ಕೆ ಸಹಿ ಹಾಕಲು ಆತುರ ತೋರುವ ಮೂಲಕ ಅಂದಿನ ಕಾಂಗ್ರೆಸ್‌ ಸರಕಾರ, ಚೀನಕ್ಕೆ ಆರ್ಥಿಕವಾಗಿ ಶರಣಾಗಲು ಹೊರಟಿತ್ತು. 2005ರಲ್ಲಿ ಅಂದಿನ ಪ್ರಧಾನಿ ಸಿಂಗ್‌ ಮತ್ತು ಚೀನದ ಪ್ರಧಾನಿ ವೆನ್‌ ಜಿಯಾ­ಬಾವೊ ಎದುರಲ್ಲಿ ಒಪ್ಪಂದ ಕುರಿತು ಪ್ರಸ್ತಾವ‌ ಮಂಡಿಸ ಲಾಗಿತ್ತು ಎಂದಿದ್ದಾರೆ.

ದಾಖಲೆ ಬಹಿರಂಗ: 2005-06ರಲ್ಲಿ ರಾಜೀವ್‌ಗಾಂಧಿ ಪ್ರತಿಷ್ಠಾನಕ್ಕೆ ಚೀನ ದೊಡ್ಡ ಮೊತ್ತದ ದೇಣಿಗೆ ನೀಡಿತ್ತು. ಅಲ್ಲದೆ, ಚೀನ ಸರಕಾರ, ರಾಜೀವ್‌ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್ ಕಾಂಟೆಂಪರರಿ ಸ್ಟಡೀಸ್‌ಗೆ ಕೂಡ ದೇಣಿಗೆ ನೀಡಿದೆ. ಪ್ರತಿಷ್ಠಾನಕ್ಕೆ ಚೀನದಿಂದ ದೇಣಿಗೆ ಪಡೆದ ಅನಂತರ ಅಂದಿನ ಯುಪಿಎ ಆಡಳಿತದ ಅವಧಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲು ಕಾಂಗ್ರೆಸ್‌ ಪಕ್ಷ ಆತುರ ತೋರಿತು ಎಂದು ಸರಕಾರದ ಆಂತರಿಕ ದಾಖಲೆಗಳು ಬಹಿರಂಗಪಡಿಸಿವೆ.

ಸಚಿವಾಲಯಗಳಿಂದಲೂ ಪ್ರತಿಷ್ಠಾನಕ್ಕೆ ದೇಣಿಗೆ
ರಾಜೀವ್‌ಗಾಂಧಿ ಪ್ರತಿಷ್ಠಾನಕ್ಕೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ದೇಣಿಗೆ ನೀಡಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಆರೋ­ಪಿಸಿರುವ ಬೆನ್ನ ಹಿಂದೆಯೇ, ರಾಜೀವ್‌ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್ ಕಾಂಟೆಂಪರರಿ ಸ್ಟಡೀಸ್‌ (ಆರ್‌ಜಿಐಸಿಎಸ್‌)ಗೆ ಯುಪಿಎ ಆಡಳಿ­ತಾ­ವ­ಧಿಯಲ್ಲಿ 7 ಕೇಂದ್ರ ಸಚಿವಾ­ಲಯಗಳು ಮತ್ತು 11 ಸಾರ್ವಜನಿಕ ವಲಯದ ಸಂಸ್ಥೆಗಳು (ಪಿಎಸ್‌ಯು) ದೇಣಿಗೆ ನೀಡಿರುವ ಸಂಗತಿ ಬಯಲಾಗಿದೆ.

Advertisement

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ, ಗೃಹ, ಪರಿಸರ ಮತ್ತು ಅರಣ್ಯ ಹಾಗೂ ಆರೋಗ್ಯ ಸಚಿವಾಲಯ ಸೇರಿದಂತೆ 7 ಸಚಿವಾಲಯಗಳು ಆರ್‌ಜಿಐಸಿಎಸ್‌ಗೆ ದೇಣಿಗೆ ನೀಡಿರುವುದು ತಿಳಿದು ಬಂದಿದೆ. ಅಲ್ಲದೆ, ಸಾರ್ವಜನಿಕ ವಲಯದ ಉದ್ಯಮಗಳೂ ದೇಣಿಗೆ ನೀಡಿದ್ದು, ಈ ಪೈಕಿ, ಹುಡ್ಕೊ, ಐಡಿಬಿಐ, ಒಐಎಲ್‌, ಒಎನ್‌ಜಿಸಿ, ಎಸ್‌ಬಿಐಗಳು ಸೇರಿವೆ ಎಂಬ ಸಂಗತಿಯನ್ನು ಸರಕಾರದ ಆಂತರಿಕ ದಾಖಲೆಗಳು ಬಹಿರಂಗ ಪಡಿಸಿವೆ. ದೇಣಿಗೆ ನೀಡಿರುವುದನ್ನು ಕಾಂಗ್ರೆಸ್‌ ಪಕ್ಷ ನಿರಾಕರಿಸಿಲ್ಲ. ಆದರೆ, ಇವುಗ­ಳಿಂದ ಎಷ್ಟು ಮೊತ್ತದ ದೇಣಿಗೆ ನೀಡಲಾಗಿದೆ ಎಂಬ ವಿವರಗಳು ಇನ್ನೂ ತಿಳಿದು ಬಂದಿಲ್ಲ.

ಮೊದಲಿಗೆ ಧ್ವನಿ ಎತ್ತಿದ್ದು ನಾನು: ಸ್ವಾಮಿ
ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಜೀವ್‌ಗಾಂಧಿ ಪ್ರತಿಷ್ಠಾನಕ್ಕೆ (ಆರ್‌ಜಿಎಫ್) ಪ್ರಧಾನಮಂತ್ರಿಯವರ ಪರಿಹಾರ ನಿಧಿಯಿಂದ ದೇಣಿಗೆ ನೀಡಲಾದ ವಿಷಯ ಕುರಿತು ಮೊದಲಿಗೆ ಧ್ವನಿ ಎತ್ತಿದ್ದು ತಾವು ಎಂದು ಸಂಸದ ಸುಬ್ರಹ್ಮಣ್ಯನ್‌ ಸ್ವಾಮಿ ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, 2015ರಲ್ಲಿ ನಾನು ಈ ಹಗರಣ ಕುರಿತು ಧ್ವನಿ ಎತ್ತಿದ್ದೆ.

ಪ್ರತಿಷ್ಠಾನಕ್ಕೆ ಹಂಚಿಕೆ ಮಾಡಲಾದ ಜಮೀನನ್ನು ವಾಪಸ್‌ ಪಡೆಯುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವನ್ನು ಆಗ್ರಹಿಸಿದ್ದೆ. 1988ರಲ್ಲಿ ಕಾಂಗ್ರೆಸ್‌ ಪ್ರಧಾನ ಕಚೇರಿ ನಿರ್ಮಿಸಲು ಈ ಜಮೀನನ್ನು ನೀಡಲಾಗಿತ್ತು. ಇದನ್ನು ಖಾಸಗಿ ಉದ್ದೇಶಕ್ಕೆ ಬಳಸಲು ಬರುವುದಿಲ್ಲ. ಹೀಗಾಗಿ, ಜಮೀನು ಹಂಚಿಕೆ ರದ್ದುಗೊಳಿಸಲು ಕೋರಿದ್ದೆ. ಕೇಂದ್ರ ಸರಕಾರ ಈಗಲಾದರೂ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next