ಬೆಂಗಳೂರು: ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಪಕ್ಷದ ಸಾಂಸ್ಥಿಕ ಬದಲಾವಣೆ ನಡೆಸುವುದಕ್ಕೆ ಬಿಜೆಪಿ ವರಿಷ್ಠರು ಬಹುತೇಕ ಒಪ್ಪಿಗೆ ನೀಡಿದ್ದು, ನವರಾತ್ರಿ ಸಂದರ್ಭದಲ್ಲಿ ಹೊಸ ರಾಜ್ಯಾಧ್ಯಕ್ಷರ ನೇಮಕ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೊಸ ಸಾರಥಿಯ ನೇಮಕ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಕೆಲವು ಸಂದೇಶಗಳು ರಾಜ್ಯ ಘಟಕಕ್ಕೆ ರವಾನೆಯಾಗಿದ್ದು, ಹೆಸರನ್ನು ರಹಸ್ಯವಾಗಿಡಲಾಗಿದೆ. ಒಕ್ಕಲಿಗ, ಹಿಂದುಳಿದ ವರ್ಗ ಅಥವಾ ಲಿಂಗಾಯತ ಸಮುದಾಯಕ್ಕೆ ಸೇರಿದವರು ರಾಜ್ಯಾಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದ್ದು, ಅಕ್ಟೋಬರ್ 19 ಅಥವಾ 20ರಂದು ನೇಮಕ ಪ್ರಕಟವಾಗುವ ಸಾಧ್ಯತೆ ಇದೆ. ರಾಜ್ಯಾಧ್ಯಕ್ಷರ ಜತೆಗೆ ಕೆಲವು ಪ್ರಧಾನ ಕಾರ್ಯದರ್ಶಿಗಳ ನೇಮಕವೂ ನಡೆಯುವ ಸಾಧ್ಯತೆಯೂ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ವಿಪಕ್ಷ ನಾಯಕ ವಿಳಂಬ?:
ಆದರೆ ವಿಪಕ್ಷ ನಾಯಕನ ಆಯ್ಕೆ ವಿಚಾರ ಇನ್ನೂ ಕೆಲವು ಸಮಯ ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ. ವಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ. ಬಿಜೆಪಿಯಲ್ಲಿ ಸಾಕಷ್ಟು ಸಮರ್ಥರಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಸಲಹೆ ನೀಡಿದ್ದಾರೆ ಎನ್ನಲಾಗಿದೆ.