ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಕಾರ್ಯತಂತ್ರ ರೂಪಿಸಲಾಗಿದ್ದು, ಮೊದಲ ಇಬ್ಬರು ಅಭ್ಯರ್ಥಿಗಳಿಗೆ ಮತ ಹಾಕುವ ಶಾಸಕರನ್ನು ನಿಗದಿ ಪಡಿಸುವುದು ಮತ್ತು ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಶಾಸಕರ ಮತಗಳನ್ನು ಸೆಳೆಯುವ ಕಾರ್ಯತಂತ್ರ ರೂಪಿಸಲಾಗಿದೆ.
ರವಿವಾರ ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಮತ್ತು ಕೆಲವು ಹಿರಿಯ ನಾಯಕರೊಂದಿಗೆ ಈ ಬಗ್ಗೆ ಸಭೆ ನಡೆಸಲಾಗಿದೆ. ಮೊದಲ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಮತ್ತು ಎರಡನೇ ಅಭ್ಯರ್ಥಿ ಜಗ್ಗೇಶ್‌ಗೆ ತಲಾ 45 ಮತ ಹಾಕಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದ್ದು, ಮೂರನೇ ಅಭ್ಯರ್ಥಿ ಲೆಹರ್ ಸಿಂಗ್‌ಗೆ ಉಳಿದ 32 ಮತ ಹಾಕಲು ನಿರ್ಧರಿಸಲಾಗಿದೆ. ಯಾರಿಗೆ ಯಾವ ಶಾಸಕರು ಮತ ಹಾಕಬೇಕೆಂದು ಮತವಿಂಗಡನೆಯ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.ಈ ಬಗ್ಗೆ ಅರುಣ್ ಸಿಂಗ್ ಅವರು ಪಕ್ಷದ ವರಿಷ್ಠರ ಗಮನಕ್ಕೆ ತರಲಿದ್ದಾರೆ ಎನ್ನಲಾಗಿದೆ.
ಮೊದಲ ಮತ್ತು 2ನೇ ಅಭ್ಯರ್ಥಿಗೆ ತಲಾ 45 ಮತ ಸಾಕೆಂದು ವರಿಷ್ಠರು ತೀರ್ಮಾನ ಮಾಡಿದರೆ, 45 ಶಾಸಕರ ಮೊದಲ ಪ್ರಾಶಸ್ತ್ಯ ಮತ ಮೊದಲ ಮತ್ತು 2ನೇ ಅಭ್ಯರ್ಥಿಗೆ ಸಿಗಲಿದೆ. ಈ ವೇಳೆ ತಾಂತ್ರಿಕ ಸಮಸ್ಯೆಗಳಾಗದಂತೆ ಎಚ್ಚರ ವಹಿಸಿ ಒಂದು ಹೆಚ್ಚುವರಿ ಮತವನ್ನು ಮೊದಲನೇ ಮತ್ತು 2ನೇ ಅಭ್ಯರ್ಥಿಗೆ ಹಾಕಬೇಕೆಂದು ವರಿಷ್ಠರು ಸೂಚನೆ ನೀಡಿದರೆ ಒಬ್ಬ ಅಭ್ಯರ್ಥಿಗೆ ತಲಾ 46 ಮತ ಹಾಕಲು ಯೋಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆಗ ಮೂರನೇ ಅಭ್ಯರ್ಥಿಗೆ 30 ಮತಗಳು ದೊರೆಯಲಿವೆ. ಜತೆಗೆ ಎರಡನೇ ಪ್ರಾಶಸ್ತ್ಯ ಮತದ ಮೂಲಕ 3ನೇ ಅಭ್ಯರ್ಥಿಯನ್ನು ಹೇಗೆ ಗೆಲ್ಲಿಸಿಕೊಳ್ಳಬಹುದೆಂಬ ಲೆಕ್ಕಾಚಾರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲವು ಶಾಸಕರಿಂದ ಬಿಜೆಪಿಯ ಮೂರನೇ ಅಭ್ಯರ್ಥಿಗೆ ಮತ ಹಾಕಿಸುವ ಕುರಿತಾಗಿಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಕನಿಷ್ಠ ಐದಾರು ಶಾಸಕರಿಂದ ಬಿಜೆಪಿಯ ಮೂರನೇ ಅಭ್ಯರ್ಥಿಗೆ ಮತ ಹಾಕಿಸಿದರೆ ಮೂರನೇ ಅಭ್ಯರ್ಥಿಯ ಗೆಲುವು ಸುಲಭವಾಗಲಿದೆ ಎಂಬ ಲೆಕ್ಕಾಚಾರ ಇದೆ ಎಂದು ತಿಳಿದು ಬಂದಿದೆ.
ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸಿರುವ ಎಲ್ಲ 3 ಅಭ್ಯರ್ಥಿಗಳು ವಿಜೇತರಾಗಲಿದ್ದಾರೆ. ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಟ್ಟಿದೆ. ಕೇಂದ್ರದ ಬಿಜೆಪಿ ಸರಕಾರ ಮತ್ತು ಬಸವರಾಜ ಬೊಮ್ಮಾಯಿ ಅವರ ಸರಕಾರ ಮಾಡಿದ ಉತ್ತಮ ಕಾರ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಶಾಸಕರು ಬಿಜೆಪಿ ಪರವಾಗಿ ಮತ ಚಲಾಯಿಸಲಿದ್ದಾರೆ.
-ಅರುಣ್ ಸಿಂಗ್, ರಾಜ್ಯ ಬಿಜೆಪಿ ಉಸ್ತುವಾರಿ