Advertisement

ಕಳಸಾ-ಬಂಡೂರಿ ವಿಚಾರದಲ್ಲಿ ಬಿಜೆಪಿ ರಾಜಕಾರಣ: ಎಚ್‌ಡಿಕೆ  

10:22 PM Feb 10, 2023 | Team Udayavani |

ಬೆಳಗಾವಿ: ಕೇಂದ್ರ, ಕರ್ನಾಟಕ ಮತ್ತು ಗೋವಾದಲ್ಲಿ ಡಬಲ್‌ ಅಲ್ಲ ಟ್ರಿಪಲ್‌ ಎಂಜಿನ್‌ ಸರ್ಕಾರ ಇದ್ದರೂ ಉತ್ತರ ಕರ್ನಾಟಕದ ಮಹತ್ವದ ಕಳಸಾ ಮತ್ತು ಬಂಡೂರಿ ವಿಚಾರದಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಇದೇ ವಿಷಯ ಇಟ್ಟುಕೊಂಡು ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ.

Advertisement

ನ್ಯಾಯಾಧಿಕರಣದ ಆದೇಶ ಅನುಷ್ಠಾನಕ್ಕೆ ಇಷ್ಟು ಸಮಯ ಏಕೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಖಾನಾಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಕಳಸಾ ಬಂಡೂರಿ ಯೋಜನೆಗೆ 100 ಕೋಟಿ ಹಣ ಕೊಟ್ಟು ಕೆಲಸ ಆರಂಭ ಮಾಡಿದೆ. ಆಗ ಯೋಜನೆ ಜಾರಿಗೆ ಕಾನೂನು ಸಮಸ್ಯೆ ಇತ್ಯರ್ಥ ಮಾಡಬೇಕು ಎಂದಾಗ ಅನೇಕರು ವಿರೋಧ ಮಾಡಿದರು. ಅವರಿಗೆ ಕೆಲಸ ಆಗುವುದು ಬೇಕಿರಲಿಲ್ಲ. ಪ್ರಚಾರ ಬೇಕಿತ್ತು ಎಂದರು.

ಮಹದಾಯಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಈ ನೀರು ಹಂಚಿಕೆಯಲ್ಲಿ ನಮಗೆ ಅನ್ಯಾಯವಾಗಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಯಾವುದೇ ಪ್ರಗತಿಯಾಗಿಲ್ಲ. ಗೋವಾ ಆಕ್ಷೇಪದ ಮೇಲೆ ಆಕ್ಷೇಪ ಮಾಡುತ್ತಿದೆ. ಹಾಗಾದರೆ ಇದಕ್ಕೆ ಯಾರು ಹೊಣೆ, ಕೇಂದ್ರ ಸರ್ಕಾರಕ್ಕೆ ರಾಜ್ಯದ ಬಗ್ಗೆ ಅದರಲ್ಲೂ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕಿತ್ತು ಎಂದರು.

ರಮೇಶ ಜಾರಕಿಹೊಳಿ ಸಿಡಿ ತಯಾರಿಕೆ, ಅದರ ಕಾರ್ಖಾನೆ ಬಗ್ಗೆ ಯೋಚನೆ ಮಾಡುವ ಹಾಗೂ ಮಾತನಾಡುವಷ್ಟು ಸಮಯ ನನಗೆ ಇಲ್ಲ. ಮೇಲಾಗಿ ಸಿಡಿಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಇದನ್ನು ಇಟ್ಟುಕೊಂಡು ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಜನರ ಮುಂದೆ ಇದನ್ನು ಪ್ರಸ್ತಾಪ ಮಾಡಿ ಮತ ಗಳಿಸಲು ಆಗಲ್ಲ. ಹೀಗಿರುವಾಗ ಅದನ್ನು ಬಿಟ್ಟು ಜನರ ಸಮಸ್ಯೆಗಳ ಕಡೆ ಗಮನಹರಿಸಿದರೆ ಒಳ್ಳೆಯದು. ಕಲಬುರಗಿ ಬಗ್ಗೆ ಪ್ರಧಾನಿ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಹಾಗಾದರೆ ಕಲಬುರಗಿಗೆ ನಿಮ್ಮ ಕೊಡುಗೆ ಏನು ಎಂದು ಅದೇ ಪ್ರಶ್ನೆಯನ್ನು ನಾವು ಬಿಜೆಪಿಗೆ ಕೇಳುತ್ತೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next