ಶ್ರೀರಂಗಪಟ್ಟಣ: ಬಿಜೆಪಿ ಸರ್ಕಾರಗಳು ಕೋಮು ಸೌಹಾರ್ದತೆ ಕಾಪಾಡದೆ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿ ಧರ್ಮ ಧರ್ಮಗಳನ್ನು ಎತ್ತಿಕಟ್ಟಿ, ಸರ್ಕಾರದ ಮೇಲಿನ ಶೇ.40 ಭ್ರಷ್ಟಾಚಾರ ಆರೋಪದ ವಿಷಯಗಳನ್ನು ಮುಚ್ಚಿಹಾಕುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿ ನಂತರ ಕರ್ನಾಟಕದ ಗಡಿ ಭಾಗ ಚಾಮರಾಜ ನಗರದ ಮೂಲಕ ಮೈಸೂರು ಮಂಡ್ಯ ಮಾರ್ಗವಾಗಿ ಪಾದಯಾತ್ರೆ ನಡೆಸುವ ಹಿನ್ನೆಲೆ ಈ ಮಾರ್ಗದ ಸ್ಥಳಗಳ ಪರಿಶೀಲನೆ ನಡೆಸಿದ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅವರಂತೆ ಯಾತ್ರೆ ಮಾಡಿ ಧಂಗೆ, ಕೊಲೆ, ಸುಲಿಗೆಯನ್ನು ನಾವು ಮಾಡಿಲ್ಲ. ಅವರು ಯಾವಾಗ ಯಾತ್ರೆ ಮಾಡಿದರೂ ಕೋಮುಗಲಭೆ ಆಗಿದೆ. ನಮ್ಮದು ಕೋಮುಸೌಹಾರ್ದತೆ ಯೊಂದಿಗೆ ಒಡೆದ ಎಲ್ಲಾ ಧರ್ಮದ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಎಂದರು.
ನಕಲಿ ದೇಶಭಕ್ತರು: ಈಗಾಗಲೇ ಭಾರತ ಕವಲು ದಾರಿಯಲ್ಲಿದ್ದು, ಅಸಲಿ ದೇಶಭಕ್ತರು ಒಂದು ಕಡೆಯಾದರೆ, ಸಂಘ ಪರಿವಾರ ಅಂತ ಹೇಳಿ ನಕಲಿ ದೇಶ ಭಕ್ತರಾಗಿ¨ªಾರೆ. ದೇಶದ ಏಕತೆ, ಸಮಗ್ರತೆ ಬಗ್ಗೆ ಮಾತನಾಡಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ. ಸ್ವಾತಂತ್ರ್ಯಕ್ಕೆ ಬಲಿದಾನ ಮಾಡಿದವರ ಹೆಸರಿಗೆ ಬಿಜೆಪಿ ಕಳಂಕ ತರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೀಗ ಶೇ.50 ಆಗಿದೆ: ಭ್ರಷ್ಟಾಚಾರದ ಜತೆಗೆ ಬೆಲೆ ಏರಿಕೆ ಮಾಡಿ ಶೇ.50 ಕಮಿಷನ್‌ನಿಂದ ಜನ ತತ್ತರಿಸಿದ್ದಾರೆ. ಕೇಂದ್ರ-ರಾಜ್ಯ ಬಿಜೆಪಿ ಭ್ರಷ್ಟಾಚಾರ ಮರೆ ಮಾಚಲು ಇತಿಹಾಸಗಳನ್ನು ತಿದ್ದಿ ದೇಶದಲ್ಲಿ ಜನರಿಗೆ ಗೊಂದಲ ಮೂಡಿಸುತ್ತಿದೆ. ಮಹಿಳೆಯರಿಗೆ ರಕ್ಷಣೆ ಕೊಡಲಾಗುತ್ತಿಲ್ಲ, ರೈತರಿಗೆ ಬೆಂಬಲ ಬೆಲೆ ಕೊಡುತ್ತಿಲ್ಲ, ಪ್ರವಾಹ ಹಾನಿಗೆ ಪರಿಹಾರವನ್ನೂ ನೀಡಿಲ್ಲ.
ಇದರ ವಿರುದ್ಧ ಹೋರಾಟ ನಡೆಸಲು ದೇಶದ ಗಡಿಭಾಗ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಮುಂದಿನ ತಿಂಗಳು ಪಾದಯಾತ್ರೆ ಹಮ್ಮಿಕೊಂಡಿದ್ದು ಸೆ.7ರಂದು ಚಾಲನೆ ನೀಡಲಿದ್ದಾರೆ. ಸುಮಾರು 3700ಕಿ.ಮೀ. ದೂರವನ್ನು 21 ದಿನ ಕೇರಳ ಮಾರ್ಗವಾಗಿ ಕರ್ನಾಟ ಕದಲ್ಲಿ ಚಾಮರಾಜನಗರ ಮೂಲಕ ಮೈಸೂರು ಮಂಡ್ಯ ಮಾರ್ಗವಾಗಿ ಬಳ್ಳಾರಿವರೆಗೂ 521 ಕಿ.ಮೀ. ರಾಜ್ಯ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದರು.
ಇನ್ನು ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಾಜಿ ಸಚಿವರಾದ ನರೇಂದ್ರಸ್ವಾಮಿ, ಎಂಎಲ್‌ಸಿ ಮಧು ಜಿ.ಮಾದೇಗೌಡರೊಂದಿಗೆ ಜಿಲ್ಲೆಯ ಮಾಜಿ ಸಚಿವರು, ಮಾಜಿ ಶಾಸಕರ ಜತೆಗೂಡಿ ಯಶಸ್ಸುಗೊಳಿಸಲಿದ್ದಾರೆಂದರು. ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಆರ್.ಧ್ರುವನಾರಾಯಣ್, ಸಲೀಂಅಹಮದ್, ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಎಂಎಲ್‌ಸಿ ದಿನೇಶ್ ಗೂಳಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಎನ್., ಸಿ.ಡಿ.ಗಂಗಾಧರ್ ಮತ್ತಿತರರಿದ್ದರು.