Advertisement

ಆಯ್ದ ಕ್ಷೇತ್ರಗಳತ್ತ ಬಿಜೆಪಿ ವಿಶೇಷ ಒತ್ತು

10:55 PM Nov 26, 2019 | Team Udayavani |

ಬೆಂಗಳೂರು: ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿರುವ ಬಿಜೆಪಿ, ತೀವ್ರ ಹಣಾಹಣಿ ಕ್ಷೇತ್ರಗಳತ್ತ ವಿಶೇಷ ಗಮನ ಹರಿಸಲು ಮುಂದಾಗಿದೆ. ಮುಖ್ಯವಾಗಿ ಕೆ.ಆರ್‌.ಪೇಟೆ, ಹುಣಸೂರು, ಯಶವಂತಪುರ, ಹೊಸಕೋಟೆ ಹಾಗೂ ರಾಣೆಬೆನ್ನೂರು ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ನಿರೀಕ್ಷೆ ಹಿನ್ನೆಲೆಯಲ್ಲಿ ವ್ಯಾಪಕ ಪ್ರಚಾರದ ಜತೆಗೆ ಸಂಘಟನೆಗೆ ಒತ್ತು ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

Advertisement

ಮೇಲ್ಕಂಡ 5 ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿ ಕಂಡು ಬಂದ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯತಂತ್ರ ಹಣೆಯಲಾಗುತ್ತಿದೆ. ಸ್ಥಳೀಯ ಸಣ್ಣ ಪುಟ್ಟ ಮುಖಂಡರು, ಹಿರಿಯರ ವಿಶ್ವಾಸ ಗಳಿಸುವುದು. ಹಿನ್ನೆಡೆ ಆಗಬಹುದೆಂಬ ಪ್ರದೇಶಗಳಲ್ಲಿ ಇನ್ನಷ್ಟು ಬಿರುಸಿನ ಪ್ರಚಾರ ನಡೆಸುವುದು. ಯಾರನ್ನೂ ಕಡೆಗಣಿಸದೆ ಬೆಂಬಲ ಪಡೆದು ಸಂಘಟಿತವಾಗಿ ಪ್ರಚಾರ ನಡೆಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಬಚ್ಚೇಗೌಡರ ನಡೆಯತ್ತ ಚಿತ್ತ: ಹೊಸಕೋಟೆ ಕ್ಷೇತ್ರದಲ್ಲಿ ಈವರೆಗೆ ಸಂಸದ ಬಚ್ಚೇಗೌಡ ಪ್ರಚಾರಕ್ಕಿಳಿಯದಿರುವ ಬಗ್ಗೆಯೂ ಪಕ್ಷದಲ್ಲಿ ಚರ್ಚೆಯಾಗುತ್ತಿದೆ. ಪಕ್ಷ ಚಿಕ್ಕಬಳ್ಳಾಪುರ ಕ್ಷೇತ್ರದ ಉಸ್ತುವಾರಿಯಾಗಿ ನೇಮಕ ಮಾಡಿದ್ದರೂ ಬಚ್ಚೇಗೌಡರು ಪ್ರಚಾರ ನಡೆಸದಿರುವುದು ಸರಿಯಲ್ಲ. ಈ ಬಗ್ಗೆ ಸ್ಪಷ್ಟನೆ ಪಡೆಯಬೇಕು. ಒಂದೊಮ್ಮೆ ಸ್ಪಂದಿಸದಿದ್ದರೆ ನೋಟಿಸ್‌ ನೀಡುವ ಬಗ್ಗೆ ಚಿಂತಿಸಬೇಕು ಎಂಬ ಮಾತು ಪಕ್ಷದಲ್ಲೇ ಕೇಳಿಬಂದಿದೆ.

ಇನ್ನೊಂದೆಡೆ ಸದ್ಯಕ್ಕೆ ಬಚ್ಚೇಗೌಡರ ವಿರುದ್ಧ ಕ್ರಮ ಕೈಗೊಂಡರೆ ಅದು ಉಪಚುನಾವಣೆ ಮೇಲೆ ಪರಿಣಾಮ ಬೀರಬಹುದು. ಅದು ಪಕ್ಷದ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್‌ ಅವರ ಹಿನ್ನೆಡೆಗೂ ಕಾರಣವಾಗಬಹುದು. ಹೀಗಾಗಿ ಸದ್ಯಕ್ಕೆ ಯಾವುದೇ ಕ್ರಮ ಜರುಗಿಸುವುದು ಒಳಿತು. ಚುನಾವಣಾ ಫ‌ಲಿತಾಂಶ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂಬ ಅಭಿಪ್ರಾಯವೂ ಇದೆ. ಈ ಬಗ್ಗೆ ಪಕ್ಷದ ಮಟ್ಟದಲ್ಲೇ ಚರ್ಚೆ ನಡೆದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next