ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದ ಹೊಸ್ತಿಲಲ್ಲಿ ಸಚಿವ ಅಶ್ವತ್ಥ ನಾರಾಯಣ ಅವರ ಸೋದರ ಪಿಎಸ್ಐ ನೇಮಕ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ವಿಚಾರ ಬಹಿರಂಗಗೊಂಡಿರುವುದು ಬಿಜೆಪಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಇದರಲ್ಲಿ ಸ್ವಪಕ್ಷೀಯರ ಕೈವಾಡದ ಬಗ್ಗೆ ಅನುಮಾನ ವ್ಯಕ್ತವಾಗತೊಡಗಿದೆ.
ಖುದ್ಧು ಅಶ್ವತ್ಥನಾರಾಯಣ ಅವರೇ ತಮ್ಮ ಆಪ್ತರ ಬಳಿ ಈ ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಡಿ.ಕೆ.ಶಿವಕುಮಾರ್ ಜತೆ ಕೈ ಜೋಡಿಸಿರುವ ನಮ್ಮವರೇ ನನ್ನ ವ್ಯಕ್ತಿತ್ವ ಹನನ ಮಾಡಲು ಈ ವಿಚಾರ ಬಹಿರಂಗಗೊಳಿಸಿದ್ದಾರೆ. ನನ್ನ ಸೋದರ ಈ ಹಗರಣದಲ್ಲಿ ಭಾಗಿಯಾಗಲು ಸಾಧ್ಯವೇ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಒಕ್ಕಲಿಗ ನಾಯಕತ್ವದ ವಿಚಾರದರಲ್ಲಿ ಬಿಜೆಪಿಯ ಒಳಮನೆಯಲ್ಲಿ ಮೊದಲಿನಿಂದಲೂ ಗುಂಪುಗಾರಿಕೆ ಬಲವಾಗಿಯೇ ಇದೆ. ಹಳೆ ಮೈಸೂರು ಭಾಗದಲ್ಲಿ ಅಶ್ವತ್ಥ ನಾರಾಯಣ ನಾಯಕತ್ವಕ್ಕೆ ಸ್ವಪಕ್ಷೀಯರಿಂದಲೇ ವಿರೋಧವಿದ್ದು, ಈ ಒಳಜಗಳದ ಫಲ ಈಗ ಅನಾವರಣಗೊಂಡಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದ ಸಭಾಪತಿ ಬಸವರಾಜ್ ಹೊರಟ್ಟಿ
ಸಂಪುಟ ಪುನಾರಚನೆ ಮಾತುಗಳು, ಶಾ ಭೇಟಿಯ ನಡುವೆ ಈ ವಿಚಾರ ಎಲ್ಲಿಗೆ ಮುಟ್ಟುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.