Advertisement

ಬಿಜೆಪಿ ಆಂತರಿಕ ಬೇಗುದಿ:  ಬೊಮ್ಮಾಯಿ ದಿಲ್ಲಿಗೆ

12:01 AM May 08, 2021 | Team Udayavani |

ಬೆಂಗಳೂರು: ಕೋವಿಡ್ ಎರಡನೇ ಅಲೆಯ ನಡುವೆಯೇ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಬೇಗುದಿಯೂ ಹೆಚ್ಚಾಗುತ್ತಿದೆ. ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಹಾಗೂ ಆಡಳಿತಾತ್ಮಕ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಲು ಗೃಹ ಹಾಗೂ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿ  ಬಿ.ಎಸ್‌. ಯಡಿಯೂರಪ್ಪ  ಅವರ ಪುತ್ರ ಬಿ.ವೈ ವಿಜಯೇಂದ್ರ ಅವರು  ದಿಲ್ಲಿಗೆ  ತೆರಳಿದ್ದಾರೆ.

Advertisement

ಉಪ ಚುನಾವಣೆ ಫ‌ಲಿತಾಂಶ, ಚಾಮರಾಜ ನಗರದಲ್ಲಿ ಆಕ್ಸಿಜನ್‌ ದೊರೆಯದೆ  ರೋಗಿಗಳು ಸಾವೀಗೀಡಾದ  ಪ್ರಕರಣ ಹಾಗೂ ಬೆಂಗಳೂರಿನಲ್ಲಿ ಬೆಡ್‌ ಬ್ಲಾಕಿಂಗ್‌ ಪ್ರಕರಣದ ಬಗ್ಗೆ ಬಿಜೆಪಿ ಹೈಕಮಾಂಡ್‌ ಬೇಸರಗೊಂಡಿದೆ ಎನ್ನಲಾಗಿದೆ.

ಉಪ ಚುನಾವಣೆ ಫ‌ಲಿತಾಂಶ, ಕೊರೊನಾ ನಿರ್ವಹಣೆ ಹಾಗೂ ಚಾಮರಾಜನಗರ ದುರಂತ ಸಂಬಂಧಿಸಿ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಸರಕಾರದ ವಿರುದ್ಧ ಮಾತನಾಡಿದ್ದರು.  ಜತೆಗೆ ಅಧ್ಯಕ್ಷ  ಜೆ.ಪಿ. ನಡ್ಡಾರಿಗೆ ವರದಿಯನ್ನೂ ನೀಡಿದ್ದರು ಎಂದು ಹೇಳಲಾಗಿತ್ತು.

ತೇಜಸ್ವಿ ಸೂರ್ಯ ಅಚ್ಚರಿ :

ಈ ಬೆಳವಣಿಗೆಯ ಬೆನ್ನಲ್ಲೇ  ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ನಗರ ಶಾಸಕರು ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಪಕವಾಗಿ ಬೆಡ್‌ ಬ್ಲಾಕಿಂಗ್‌ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಅವರ ಆರೋಪ ಕೇವಲ ಒಂದು ಕೋಮಿನವರ ವಿರುದ್ಧವಾಗಿದ್ದರೂ, ಮುಖ್ಯಮಂತ್ರಿ ಹಾಗೂ ರಾಜ್ಯ ಸರಕಾರ ಸರಿಯಾಗಿ ಕೊರೊನಾ ನಿಯಂತ್ರಿಸಲು ವಿಫ‌ಲರಾಗಿದ್ದಾರೆ ಎನ್ನುವುದನ್ನೇ ಬಿಂಬಿಸುವುದಾಗಿತ್ತು ಎನ್ನಲಾಗುತ್ತಿದೆ.  ಈ ಎಲ್ಲ ಕಾರಣಗಳಿಂದ ಸಿಎಂ ಅವರು  ಸರಕಾರ ಕೈಗೊಂಡಿರುವ ಕ್ರಮಗಳನ್ನು ವರಿಷ್ಠರಿಗೆ ತಿಳಿಸಲು ಬೊಮ್ಮಾಯಿ ಹಾಗೂ ವಿಜಯೇಂದ್ರರನ್ನು ದಿಲ್ಲಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

Advertisement

ಆಕ್ಸಿಜನ್‌ ವಿಚಾರ ಚರ್ಚೆಗೆ? :

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬೇಡಿಕೆಯಷ್ಟು  ಆಕ್ಸಿಜನ್‌ ನೀಡುವ ಕುರಿತು ಉಂಟಾದ ಗೊಂದಲದ ಬಗ್ಗೆ ಚರ್ಚಿಸಲು ಗೃಹ ಮತ್ತು ಕಾನೂನು ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಸರಕಾರದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವಡಗಿ ಅವರು ದಿಲ್ಲಿಗೆ ತೆರಳಿದ್ದಾರೆ ಎಂದು ಗೃಹ ಸಚಿವರ ಆಪ್ತ ಮೂಲಗಳು ತಿಳಿಸಿವೆ.

ಸರಕಾರ 1,700 ಟನ್‌ ಆಕ್ಷಿಜನ್‌ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು. ಹೈಕೋರ್ಟ್‌ ಸಹ ರಾಜ್ಯಕ್ಕೆ 1,200 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಒದಗಿಸಲು ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಇದರ ವಿರುದ್ಧ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಸುಪ್ರೀಂ ಕೋರ್ಟ್‌ ಈ ಬಗ್ಗೆ ರಾಜ್ಯದ ಅಗತ್ಯವನ್ನು ಪೂರೈಸುವಂತೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರೆ ಮೇರೆಗೆ ಗೃಹ ಸಚಿವರು ದಿಲ್ಲಿಗೆ ತೆರಳಿದ್ದಾರೆ ಎಂದೂ ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next