Advertisement

ದಳ-ರೈತಸಂಘ ಜಿದಾಜಿದ್ದಿ ಕಣದಲ್ಲಿ ಕಮಲ ಕಸರತ್ತು

04:28 PM May 02, 2023 | Team Udayavani |

ಮಂಡ್ಯ: ವಿಶ್ವಪ್ರಸಿದ್ಧ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿಯ ನಾಡಲ್ಲಿ ಜೆಡಿಎಸ್‌ ಹಾಗೂ ರೈತಸಂಘದ ಜಿದ್ದಾಜಿದ್ದಿನ ಕಣದಲ್ಲಿ ಬಿಜೆಪಿ ಹೋರಾಟ ನಡೆಸುತ್ತಿದೆ. ಶಾಸಕ ಸಿ.ಎಸ್‌.ಪುಟ್ಟರಾಜು ಮಣಿಸಲು ರೈತಸಂಘದೊಂದಿಗೆ ಕಾಂಗ್ರೆಸ್‌ ಹಾಗೂ ಸುಮಲತಾ ಕೈಜೋಡಿಸಿರುವುದು ಕ್ಷೇತ್ರದಲ್ಲಿ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

Advertisement

ಜೆಡಿಎಸ್‌ನಿಂದ ಶಾಸಕ ಸಿ.ಎಸ್‌.ಪುಟ್ಟರಾಜು ಅಭ್ಯರ್ಥಿಯಾಗಿದ್ದು, ನಾಲ್ಕನೇ ಬಾರಿ ಗೆಲುವಿನ ನಗೆ ಬೀರಲು ಸಜ್ಜಾಗಿದ್ದಾರೆ. ಇದಕ್ಕೆ ತಡೆಯೊಡ್ಡಲು ರೈತಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಕಸರತ್ತು ನಡೆಸುತ್ತಿದ್ದರೆ, ಇತ್ತ ಬಿಜೆಪಿಯ ಡಾ.ಎನ್‌. ಎಸ್‌.ಇಂದ್ರೇಶ್‌ ಕೂಡ ಹೋರಾಟ ನಡೆಸುತ್ತಿದ್ದಾರೆ.

ಪುಟ್ಟರಾಜು ಅಭಿವೃದ್ಧಿಯ ಮಂತ್ರ: ಶಾಸಕ ಸಿ.ಎಸ್‌.ಪುಟ್ಟರಾಜು ಮೂರು ಬಾರಿ ಶಾಸಕರಾಗಿ, ಸಚಿವರಾಗಿ, ಒಂದು ಬಾರಿ ಸಂಸದರಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಕಾಮಗಾರಿ ಪೂರ್ಣಗೊಳಿಸುವ ಮೂಲಕ ಕೆರೆಕಟ್ಟೆಗಳಿಗೆ ನೀರು ತುಂಬಿಸಿದ್ದಾರೆ. ಅಲ್ಲದೆ, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಜೊತೆಗೆ ಕೊರೊನಾ ಸಂಕಷ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಆರು ತಿಂಗಳ ಅಧಿಕಾರ ಹೊರತುಪಡಿಸಿದರೆ ಉಳಿದ ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮಂತ್ರ ಪಠಿಸುತ್ತಾ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ.

ರೈತಸಂಘಕ್ಕೆ ಕಾಂಗ್ರೆಸ್‌, ಸುಮಲತಾ ಬೆಂಬಲ: ರೈತಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿರುವ ದರ್ಶನ್‌ ಪುಟ್ಟಣ್ಣಯ್ಯ, ಕಳೆದ ಬಾರಿಯ ಚುನಾವಣೆಯಲ್ಲಿ ಸೋಲು ಕಂಡಿದ್ದರು. ತಂದೆ ಸಾವಿನ ಹಿನ್ನೆಲೆಯಲ್ಲಿ ರಾಜಕೀಯ ಪ್ರವೇಶಿಸಿದ ದರ್ಶನ್‌, ಅನುಕಂಪದ ಅಲೆಯಲ್ಲೂ ಪರಾಭವಗೊಂಡಿದ್ದರು. ಮೊದಲ ಚುನಾವಣೆ ಎದುರಿಸಿದ ಬಳಿಕ ಅಮೆರಿಕಾ ಸೇರಿದ ಬಳಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದು ಕಡಿಮೆ. ಇದೀಗ ಶಾಸಕ ಸಿ.ಎಸ್‌ .ಪುಟ್ಟರಾಜು ವಿರುದ್ಧ ಸಮರ ಸಾರಿರುವ ದರ್ಶನ್‌ಗೆ ಕಾಂಗ್ರೆಸ್‌ ಬೆಂಬಲ ಘೋಷಿಸಿದೆ. ಅಲ್ಲದೆ, ಸುಮಲತಾ ಸಹ ಪರೋಕ್ಷ ಬೆಂಬಲ ನೀಡಿದ್ದಾರೆ. ತಂದೆ ಕೆ.ಎಸ್‌.ಪುಟ್ಟಣ್ಣಯ್ಯ ವರ್ಚಸ್ಸು, ಕಳೆದ ಬಾರಿಯ ಸೋಲಿನ ಅನುಕಂಪದ ಜೊತೆಗೆ ಕಾಂಗ್ರೆಸ್‌ ಬೆಂಬಲದೊಂದಿಗೆ ಚುನಾವಣೆ ಎದುರಿಸಲು ಮುಂದಾಗಿದ್ದಾರೆ.

ಬಿಜೆಪಿ ಪೈಪೋಟಿ: ಜೆಡಿಎಸ್‌ ಹಾಗೂ ರೈತಸಂಘದ ನಡುವೆ ಪ್ರತೀ ಚುನಾವಣೆಯಲ್ಲೂ ಪೈಪೋಟಿ ನಡೆಯುತ್ತಿತ್ತು. ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿತ್ತು. ಆದರೆ, ಈ ಬಾರಿ ಹೊಸಮುಖ ಡಾ.ಎನ್‌.ಎಸ್‌. ಇಂದ್ರೇಶ್‌ ಆಗಮನದಿಂದ ಬಿಜೆಪಿಯ ಮತ ಬ್ಯಾಂಕ್‌ ಹೆಚ್ಚಿದೆ. ಇದರಿಂದ ಮೂವರ ನಡುವೆಯೂ ಪೈಪೋಟಿ ನಡೆಯುತ್ತಿದೆ. ಅಲ್ಲದೆ, ಬಿಜೆಪಿ ಅಭ್ಯರ್ಥಿ ಇಂದ್ರೇಶ್‌ ಪಡೆಯುವ ಮತಗಳ ಆಧಾರದ ಮೇಲೆ ಜೆಡಿಎಸ್‌ -ರೈತಸಂಘದ ಸೋಲು-ಗೆಲುವು ನಿರ್ಧಾರವಾ ಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಜಾತಿವಾರು ಲೆಕ್ಕಾಚಾರ: ಮೇಲುಕೋಟೆ ಕ್ಷೇತ್ರದಲ್ಲಿ ಪುರುಷರು 99,354, ಮಹಿಳೆಯರು 1,00,764 ಹಾಗೂ 7 ಮಂದಿ ಇತರೆ ಮತದಾರರು ಸೇರಿದಂತೆ ಒಟ್ಟು 2,00,125 ಮತದಾರರಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ 7 ಸಾವಿರಕ್ಕೂ ಹೆಚ್ಚು  ಮತದಾರರು ಹೊಸದಾಗಿ ನೋಂದಾಯಿಸಿಕೊಂಡಿ ದ್ದಾರೆ. ಮಹಿಳಾ ಮತದಾರರು ಹೆಚ್ಚಿರುವುದರಿಂದ ಮಹಿಳೆಯರ ಮತಗಳು ನಿರ್ಣಾಯಕವಾಗಲಿವೆ. ಒಕ್ಕಲಿಗ 1,00,230, ಲಿಂಗಾಯಿತ 36,627, ಎಸ್ಸಿಎಸ್ಟಿ 25,580, ಕುರುಬ 23,285, ಮುಸ್ಲಿಂ 10,160 ಹಾಗೂ ಇತರೆ ಮತದಾರರು 5,243 ಮತದಾರರಿದ್ದಾರೆ. ಮೂವರು ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದರಿಂದ ಒಕ್ಕಲಿಗ ಮತಗಳು ಸ್ವಲ್ಪ ಚದುರಿದರೂ ಜೆಡಿಎಸ್‌ಗೆ ಯಾವುದೇ ಪರಿಣಾಮ ಬೀರಲ್ಲ. ಕೆಲವು ಲಿಂಗಾಯಿತ ಮತಗಳನ್ನು ಬಿಜೆಪಿ ಪಡೆದರೆ, ಕಾಂಗ್ರೆಸ್‌, ರೈತಸಂಘ ಮತಗಳು ದರ್ಶನ್‌ ಕೈಹಿಡಿಯಬಹುದು.

ಕಳೆದ 5 ವರ್ಷದಲ್ಲಿ ಅಭಿವೃದ್ಧಿಗೆ ಸಾಕಷ್ಟು ಯೋಜನೆ ತಂದಿದ್ದೇನೆ. 12 ಏತ ನೀರಾವರಿ ಯೋಜನೆ ಜಾರಿಗೆ ತಂದು ದುದ್ದ ಹೋಬಳಿ ಸೇರಿದಂತೆ ವಿವಿಧೆಡೆ ಕೆರೆಕಟ್ಟೆ ತುಂಬಿಸಿದ್ದೇನೆ. ಅಭಿವೃದ್ಧಿ ಕೆಲಸ ಮೆಚ್ಚಿ ಮತದಾರರು ಕೈಹಿಡಿಯುತ್ತಾರೆ. – ಸಿ.ಎಸ್‌.ಪುಟ್ಟರಾಜು, ಜೆಡಿಎಸ್‌ ಅಭ್ಯರ್ಥಿ

ಕ್ಷೇತ್ರದಲ್ಲಿ ನಾನು ಸಾಮಾಜಿಕ ಕಾರ್ಯ ಹಮ್ಮಿಕೊಂಡು ಜನರಿಗೆ ಹತ್ತಿರವಾಗಿ ದ್ದೇನೆ. ನನ್ನ ಸಾಮಾಜಿಕ ಕಾರ್ಯಗಳ ಬಗ್ಗೆ ಮತದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಚಾರಕ್ಕೆ ಹೋದಾಗ ಜನಸ್ಪಂದನೆ ಸಿಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳು ಈ ಬಾರಿಯ ನನ್ನ ಗೆಲುವಿಗೆ ಸಹಕಾರಿಯಾಗಲಿದೆ. – ಡಾ.ಎನ್‌.ಎಸ್‌.ಇಂದ್ರೇಶ್‌, ಬಿಜೆಪಿ ಅಭ್ಯರ್ಥಿ

ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಮ್ಮ ತಂದೆಯಂತೆ ರೈತ ಪರ ಹೋರಾಟ ಮುಂದುವರಿಯಲಿದೆ. ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. – ದರ್ಶನ್‌, ಸರ್ವೋದಯ ಕರ್ನಾಟಕ ಪಕ್ಷ

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next