Advertisement

20 ರಂದು ಜಿಲ್ಲೆಗೆ ಬಿಜೆಪಿ ಪರಿವರ್ತನಾ ಯಾತ್ರೆ

02:32 PM Jan 15, 2018 | Team Udayavani |

ಚಾಮರಾಜನಗರ: ನವ ಕರ್ನಾಟಕ ನಿರ್ಮಾಣಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಕೈಗೊಂಡಿರುವ ಪರಿವರ್ತನಾ ಯಾತ್ರೆ ಯು ಜಿಲ್ಲೆಗೆ ಜ.20ರಂದು ಆಗಮಿಸಲಿದ್ದು, ಆದ್ಧೂರಿಯಾಗಿ ಸ್ವಾಗತಿಸಲು ಜಿಲ್ಲಾ ಬಿಜೆಪಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಆರ್‌.ಮಲ್ಲಿಕಾರ್ಜುನಪ್ಪ ತಿಳಿಸಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಾಲ್ಕು ವಿಧಾನ ಸಭೆ ಕ್ಷೇತ್ರಗಳಲ್ಲಿ ಎರಡು ದಿನಗಳ ಕಾಲ ಪರಿವರ್ತನಾ ಯಾತ್ರೆ ಸಂಚರಿಸಲಿದೆ. ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನಗಳಲ್ಲಿ ಬೃಹತ್‌ ಸಮಾವೇಶವನ್ನು ಸಹ ಆಯೋಜನೆ ಮಾಡಲಾಗಿದೆ. ಯಡಿಯೂರಪ್ಪ ಅವರೊಂದಿಗೆ ಕೇಂದ್ರದ ಸಚಿವರು, ರಾಜ್ಯ ಉಸ್ತುವಾರಿ ಮುರಳೀಧರ್‌ ರಾವ್‌ ಹಾಗೂ ರಾಜ್ಯದ ಮಾಜಿ ಸಚಿವರು ಮತ್ತು ಪಕ್ಷದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ 10 ಸಾವಿರಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯನ್ನು ಮಾಡಲಾಗಿದೆ. ಜಿಲ್ಲಾ ಕೇಂದ್ರವಾದ ಚಾ.ನಗರ ವಿಧಾನಸಭಾ ಕ್ಷೇತ್ರದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಲ್ಲಿಕಾರ್ಜುನಪ್ಪತಿಳಿಸಿದರು.
 
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನ.2 ರಂದು ಆರಂಭವಾಗಿರುವ ಪರಿವರ್ತನಾ ಯಾತ್ರೆಯು ರಾಜ್ಯಾದ್ಯಂತ ಸಂಚರಿಸಿ, ಶನಿವಾರ ಮಳವಳ್ಳಿ ಮಾರ್ಗವಾಗಿ ಸಾಯಂಕಾಲ 4 ಗಂಟೆಗೆ ಹನೂರಿಗೆ ಆಗಮಿಸಲಿದೆ. ಅಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ. ಅಲ್ಲಿಂದ ಮಹದೇಶ್ವರ ಬೆಟ್ಟಕ್ಕೆ ತೆರಳಿಲಿದೆ. ಭಾನುವಾರ ಮಹದೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದು, ಅಲ್ಲಿಂದ ಹೊರಟು ಬೆಳಗ್ಗೆ 10.30ಕ್ಕೆ
ಕೊಳ್ಳೇಗಾಲಕ್ಕೆ ಯಾತ್ರೆ ಆಗಮಿಸಲಿದೆ. ಕೊಳ್ಳೆಗಾಲದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಬೃಹತ್‌ ಸಮಾವೇಶವನ್ನುದ್ದೇಶಿಸಿ ಯಡಿಯೂರಪ್ಪ ಮಾತನಾಡಲಿದ್ದಾರೆ ಎಂದು ವಿವರಿಸಿದರು. ಬಳಿಕ ಯಳಂದೂರು ಹಾಗೂ ಸಂತೇಮರಹಳ್ಳಿ ಮಾರ್ಗವಾಗಿ ಪರಿವರ್ತನಾ ಯಾತ್ರೆ ಮಧ್ಯಾಹ್ನ 2 ಗಂಟೆಗೆ ಚಾಮರಾಜನಗರಕ್ಕೆ ಆಗಮಿಸಲಿದೆ.

ತಾಲೂಕಿನ ಮಂಗಲ ಬಳಿ ಮಧ್ಯಾಹ್ನ 1.30ಕ್ಕೆ ಪರಿವರ್ತನಾ ಯಾತ್ರೆಯನ್ನು ಸ್ವಾಗತಿಸಲು ಬೈಕ್‌ ರ್ಯಾಲಿಯನ್ನು ಆಯೋಜನೆ ಮಾಡಿದ್ದು, ಸಾವಿರಕ್ಕೂ ಹೆಚ್ಚು ಬೈಕ್‌ಗಳ ಮೂಲಕ ಯಡಿಯೂರಪ್ಪ ಅವರನ್ನು ಸ್ವಾಗತಿಸಿ, ಬೈಕ್‌ ರ್ಯಾಲಿಯೊಂದಿಗೆ ನಗರಕ್ಕೆ ಕರೆತರಲಾಗುವುದು ಎಂದು ವಿವರಿಸಿದರು. 

ನಗರದ ಸಂತೇಮರಹಳ್ಳಿ ಸರ್ಕಲ್‌ಗೆ ಯಾತ್ರೆ ಬರುತ್ತಿದ್ದಂತೆ 150ಕ್ಕೂ ಹೆಚ್ಚು ಮಹಿಳೆಯರು ಪೂರ್ಣ ಕುಂಭ ಸ್ವಾಗತ ಕೋರಿ, ಅಲ್ಲಿಂದ ಮೆರವಣಿಗೆಯ ಮೂಲಕ ಸಮಾವೇಶ ನಡೆಯುವ ಹಳೆ ಬಸ್‌ ನಿಲ್ದಾಣ ಬಳಿ ವೇದಿಕೆಗೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗುತ್ತದೆ ಎಂದು ಮಲ್ಲಿಕಾರ್ಜುನಪ್ಪ ತಿಳಿಸಿದರು. 

Advertisement

ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಬಿಜೆಪಿ ಪರಿವರ್ತನಾ ಯಾತ್ರೆಗೆ ಹೆಚ್ಚು ಸಂಖ್ಯೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಬೇಕು. ಕಾಂಗ್ರೆಸ್‌ ಪಕ್ಷದ ದುರಾಡಳಿತ ವಿರುದ್ಧ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಪರಿವರ್ತನಾ ಯಾತ್ರೆ ನಾಂದಿಯಾಗಲಿದ್ದು, ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಜಿಲ್ಲೆಯ ಜನರು ಹೆಚ್ಚಿನ ಸಹಕಾರ ಮತ್ತು ಬೆಂಬಲ ನೀಡಬೇಕು ಎಂದು ಮಲ್ಲಿಕಾರ್ಜುನಪ್ಪ ಮನವಿ ಮಾಡಿದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನೂರೊಂದು ಶೆಟ್ಟಿ, ಆರ್‌. ಮಹದೇವು, ನಗರ ಘಟಕ ಅಧ್ಯಕ್ಷ ಸುಂದರರಾಜು, ಗ್ರಾಮಾಂತರ ಮಂಡಲ ಪ್ರ. ಕಾರ್ಯದರ್ಶಿ ಪುರುಷೋತ್ತಮ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next