ಬೆಂಗಳೂರು: ಸೆಪ್ಟೆಂಬರ್ 11ರಿಂದ ಡಿ.15ರವರೆಗೆ ರಾಜ್ಯದಲ್ಲಿ ಬೂತ್‌ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪದಾಧಿಕಾರಿಗಳ ಆಯ್ಕೆ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಇದಕ್ಕೆ ಪೂರ್ವಭಾವಿಯಾಗಿ ಬಿಜೆಪಿ ಸಂಘಟನಾತ್ಮಾಕ ಚುನಾವಣಾ ರಾಷ್ಟ್ರೀಯ ಕಾರ್ಯಾಗಾರ ಮಂಗಳ ವಾರ ದೆಹಲಿಯಲ್ಲಿ ನಡೆಯಿತು. ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಂಘಟನಾತ್ಮಕ ಚುನಾವಣಾಧಿಕಾರಿ ರಾಧಾಮೋಹನ್ ಸಿಂಗ್, ಸಹ ಚುನಾವಣಾ ಅಧಿಕಾರಿ ಸಿ.ಟಿ.ರವಿ, ಕರ್ನಾಟಕ ಸಂಘಟನಾ ಚುನಾವಣಾ ಉಸ್ತುವಾರಿ ಆಶ್ವತ್ಥ ನಾರಾಯಣ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಈ ಕುರಿತು ಮಾಹಿತಿ ನೀಡಿದ ಸಿ.ಟಿ.ರವಿ, ಸಂಘಟನಾತ್ಮಕ ಚುನಾವಣೆ ಪ್ರಕ್ರಿಯೆಯು ಸೆ.11ರಿಂದ ಡಿ.15ರವರೆಗೆ ನಡೆಯಲಿದೆ. ಸೆ.11ರಿಂದ 30ರವರೆಗೆ ಬೂತ್ ಮಟ್ಟದಲ್ಲಿ ಪದಾಧಿಕಾರಿಗಳ ಆಯ್ಕೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ರಾಜ್ಯದಲ್ಲಿ 57,000 ಮತಗಟ್ಟೆಗಳಿದ್ದು, ಬಹುತೇಕ ಕಡೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.
ಅ.11ರಿಂದ 31ರವರೆಗೆ ಮಂಡಲ ಹಂತದಲ್ಲಿ ಪದಾಧಿಕಾರಿಗಳ ಆಯ್ಕೆ ಚುನಾವಣೆ ನಡೆಯಲಿದೆ. ನ.11ರಿಂದ 30ರವರೆಗೆ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಚುನಾವಣೆ ನಡೆಯಲಿವೆ. ಡಿ.1ರಿಂದ 15ರವರೆಗೆ ರಾಜ್ಯ ಮಟ್ಟದ ಪದಾಧಿಕಾರಿಗಳ ಆಯ್ಕೆ ಚುನಾವಣೆ ನಡೆಯಲಿದೆ. ಸಹಮತ ಇಲ್ಲವೇ ಬಹುಮತದ ಆಧಾರದ ಮೇಲೆ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.
ನಾನಾ ಹಂತಗಳಲ್ಲಿ ಪದಾಧಿಕಾರಿಗಳ ಆಯ್ಕೆಗೆ ಅನುಸರಿಸಬೇಕಾದ ಪ್ರಕ್ರಿಯೆ, ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ಆಯ್ಕೆ ಪ್ರಕ್ರಿಯೆ ನಡೆಸುವುದು ಸೇರಿ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚೆಯಾಯಿತು. ಸದ್ಯ ಪ್ರಕಟಿಸಿರುವ ವೇಳಾಪಟ್ಟಿಯಂತೆಯೇ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.