Advertisement

Kundapur: ಗೆಲುವಿನ ಮೆಟ್ಟಿಲು ಏರುತ್ತಿರುವ ಬಿಜೆಪಿ: ಕಿರಣ್‌ ಕುಮಾರ್‌ ಕೊಡ್ಗಿ

05:09 PM May 09, 2023 | Team Udayavani |

ಕುಂದಾಪುರ: ಅಭೂತಪೂರ್ವ ಜನಸ್ಪಂದನ ದೊರೆಯುತ್ತಿದೆ. ಪ್ರತಿ ಸಭೆಗಳಲ್ಲೂ ಸಾವಿರಾರು ಮಂದಿ ಭಾಗವಹಿಸುವುದು ನೋಡಿದರೆ ಗೆಲುವಿನ ಮೆಟ್ಟಿಲು ದಿನದಿಂದ ದಿನಕ್ಕೆ ಏರುತ್ತಾ ದೊಡ್ಡ ಅಂತರದಲ್ಲಿ ವಿಜಯಿ ಆಗುವುದರಲ್ಲಿ ಸಂಶಯ ಇಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಪ್ರಚಾರ ಕಾರ್ಯದಲ್ಲಿ ನಿರಂತರ ತೊಡಗಿಸಿಕೊಂಡಿದ್ದು ಮತದಾರರು ಪ್ರಾಮಾಣಿಕತೆಗೆ, ಸಾಮಾಜಿಕ ನ್ಯಾಯಕ್ಕೆ ಬೆಲೆ ನೀಡಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಕಿರಣ್‌ ಕುಮಾರ್‌ ಕೊಡ್ಗಿ ಹೇಳಿದರು.

Advertisement

ಅವರು ಸೋಮವಾರ ವಿವಿಧೆಡೆ ಮತದಾರರನ್ನು ಭೇಟಿ ಮಾಡಿ ಪ್ರಚಾರ ಕಾರ್ಯದಲ್ಲಿ ತೊಡಗಿ ಮಾತನಾಡಿದರು.

ಬಿಜೆಪಿ ಮಾಜಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಕಾಡೂರು, ವಿವಿಧ ಸಭೆ, ಸಮಾವೇಶ, ಮನೆ ಭೇಟಿ ಮೂಲಕ ಕಿರಣ್‌ ಕುಮಾರ್‌ ಕೊಡ್ಗಿ ಅವರು 85 ಸಾವಿರಕ್ಕೂ ಅಧಿಕ ಮತದಾರರನ್ನು ನೇರ ಭೇಟಿ ಮಾಡಿದ್ದಾರೆ. ವಿವಿಧ ನಗರಗಳಲ್ಲಿ ನಡೆದ ಪಾದಯಾತ್ರೆ ಮೂಲಕ ಲಕ್ಷಕ್ಕೂ ಅಧಿಕ ಜನರನ್ನು ಸಂಪರ್ಕಿಸಿದ್ದಾರೆ. ಎಲ್ಲೆಡೆ ಕಾರ್ಯಕರ್ತರ, ಮತದಾರರ ಬೆಂಬಲ ಬಿಜೆಪಿಗೆ ವ್ಯಕ್ತವಾಗಿದೆ. ಒಬ್ಬ ಪ್ರಾಮಾಣಿಕ, ಸಜ್ಜನಿಕೆಯ ಅಭ್ಯರ್ಥಿಯನ್ನು ಗೆಲ್ಲಿಸುವುದು ಮತದಾರರ ಗುರಿಯಾಗಿದೆ ಎಂದರು.

ಬಿಜೆಪಿ ಮಂಡಲದಲ್ಲಿ 7 ಮಹಾಶಕ್ತಿ ಕೇಂದ್ರಗಳು, 40 ಶಕ್ತಿ ಕೇಂದ್ರಗಳಿವೆ. 42 ಕಡೆ ಕಾರ್ಯಕರ್ತರ ಸಭೆ ನಡೆಸಿದ್ದು ಪ್ರತಿ ಸಭೆಗಳಲ್ಲೂ ಕನಿಷ್ಟ 800ರಿಂದ 1,500 ತನಕ ಜನ ಸೇರಿದ್ದಾರೆ. ಕೋಟೇಶ್ವರದಲ್ಲಿ, ಕುಂದಾಪುರ ನಗರದಲ್ಲಿ ಬೃಹತ್‌ ಸಭೆಗಳನ್ನು ನಡೆಸಲಾಗಿದೆ. ಸಾಲಿಗ್ರಾಮದಲ್ಲಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರ ಕಾರ್ಯಕ್ರಮ ನಡೆದಿದೆ. ಹೀಗೆ ಕನಿಷ್ಟ ದಿನಗಳಲ್ಲಿ ಗರಿಷ್ಟ ಜನರನ್ನು ತಲುಪುವ ಮೂಲಕ ಕಿರಣ್‌ ಕೊಡ್ಗಿ ಅವರು ಮತದಾರರಿಗೆ ಸಮೀಪ ಆಗಿದ್ದಾರೆ ಎಂದರು.

ಮಂಡಲ ಅಧ್ಯಕ್ಷ ಶಂಕರ್‌ ಅಂಕದಕಟ್ಟೆ, ಕುಂದಾಪುರ ನಗರದಲ್ಲಿ ಬೃಹತ್‌ ಪಾದಯಾತ್ರೆ ಮೂಲಕ ಮತ ಯಾಚಿಸಲಾಗಿದೆ. ಬಹಳ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಶಾಸಕ ಹಾಲಾಡಿ ಹಾಗೂ ಅಭ್ಯರ್ಥಿ ಕಿರಣ್‌ ಕೊಡ್ಗಿ ಅವರ ಜತೆಗೂಡಿ ಕೇಸರಿ ಶಾಲು ಹಾಕಿ ಹೆಜ್ಜೆ ಹಾಕಿದ್ದಾರೆ.

Advertisement

ಪುರಸಭೆಯ ಎಲ್ಲ ವಾರ್ಡ್‌ಗಳಲ್ಲಿ ಸ್ವತಃ ಅಭ್ಯರ್ಥಿ ಮೂಲಕ ಪ್ರಚಾರ ಮಾಡಲಾಗಿದೆ. ವಿಧಾನಸಭಾ ಕ್ಷೇತ್ರದ ಎಲ್ಲ ಪ್ರಮುಖ ಪಟ್ಟಣಗಳಲ್ಲಿ ಪಾದಯಾತ್ರೆ ನಡೆಸಿ ಅಭ್ಯರ್ಥಿ ಮತಯಾಚಿಸಿದ್ದಾರೆ. ಇವೆಲ್ಲವೂ ಕೂಡಾ ಅಭ್ಯರ್ಥಿಯ ಪರಿಚಯ ಇಲ್ಲ ಎನ್ನುವ ವಿಪಕ್ಷದ ಟೀಕೆಗೆ ಉತ್ತರವಾಗಿದೆ. ಕಳೆದ 30 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಇರುವ ಕಿರಣ್‌ ಕೊಡ್ಗಿ ಅವರನ್ನು ಬಿಜೆಪಿ ಕಾರ್ಯಕರ್ತರಿಗೆ ಪರಿಚಯಿಸಬೇಕಿರಲಿಲ್ಲ. ಮತದಾರರನ್ನು ಈಗ ಸಮಾವೇಶ, ಸಭೆ, ಪಾದಯಾತ್ರೆ ಮೂಲಕ ತಲುಪಿದಾಗಲೂ ಎಲ್ಲಿಯೂ ಅಪರಿಚಿತ ಎಂಬ ಭಾವದ ಪ್ರತಿಕ್ರಿಯೆ ಬರಲಿಲ್ಲ. ಬಿಜೆಪಿ ಗೆಲುವಿಗೆ ಯಾರಿಂದಲೂ ತಡೆ ಒಡ್ಡಲು ಸಾಧ್ಯವಿಲ್ಲ ಎಂದರು.

ಸಾಮಾಜಿಕ ನ್ಯಾಯ
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹೇಗೆ ಜಾತಿ, ಮತ, ಧರ್ಮಗಳನ್ನು ಸಮಾನವಾಗಿ ಕಾಣುತ್ತಾ ಸಾಮಾಜಿಕ ನ್ಯಾಯವನ್ನು ಪರಿಪಾಲಿಸುತ್ತಿದ್ದರೋ ಅದೇ ಮಾದರಿಯಲ್ಲಿ ಸಾಮಾಜಿಕ ನ್ಯಾಯ ಕಾಪಾಡುತ್ತೇನೆ. ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತೇನೆ. ಕ್ಷೇತ್ರದ ಜನರ ಜತೆ ನಿಕಟ ಸಂಪರ್ಕದಲ್ಲಿ ಇರುತ್ತೇನೆ. ಕ್ಷೇತ್ರದ ಜನರ ಬೇಡಿಕೆಗಳನ್ನು ಈಡೇರಿಸಲು ಎಲ್ಲ ಹಂತದಲ್ಲೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಳೆದ ಮೂರು ದಶಕಗಳಿಂದ ರಾಜಕೀಯ ಜೀವನದಲ್ಲಿ ಇದ್ದು ಈವರೆಗೂ ಯಾವುದೇ ಹುದ್ದೆ, ಅಧಿಕಾರದ ಹಿಂದೆ ಹೋದವನಲ್ಲ. ಅನಿರೀಕ್ಷಿತವಾಗಿ ದೊರೆತ ಈ ಅವಕಾಶದ ಸದ್ಬಳಕೆ ಮಾಡುತ್ತೇನೆ. ಅದಕ್ಕಾಗಿ ಮತದಾರರ ಆಶೀರ್ವಾದ ಅಗತ್ಯ.
ಕಿರಣ್‌ ಕುಮಾರ್‌ ಕೊಡ್ಗಿ, ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next