ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಯು ಆಪರೇಶನ್ ಕಮಲಕ್ಕೆ ಮುಂದಾಗಿದ್ದು, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ ಆಫರ್ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ಇಂಡಿಯಾ ಟುಡೇ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತರೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪತನವಾಗುತ್ತದೆ ಎಂಬ ಬಿಜೆಪಿ ಹೇಳಿಕೆಗಳ ನಡುವೆ ಸಿಎಂ ಈ ಮಾತು ಹೇಳಿದ್ದಾರೆ.
“ಅವರು ಕಳೆದ ಒಂದು ವರ್ಷದಿಂದ ನನ್ನ ಸರ್ಕಾರ ಮುರಿಯಲು ಪ್ರಯತ್ನಿಸುತ್ತಿದ್ದಾರೆ. 50 ಕೋಟಿ ರೂ ಅವರು ನಮ್ಮ ಶಾಸಕರಿಗೆ ಆಫರ್ ಮಾಡಿದ್ದಾರೆ. ಅವರು ಪ್ರಯತ್ನಪಟ್ಟಿದ್ದಾರೆ, ಆದರೆ ವಿಫಲರಾಗಿದ್ದಾರೆ” ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಒಂದು ವೇಳೆ ಸೋತರೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನವಾಗುವುದು ಸುಲಭವೇ ಎಂಬ ಪ್ರಶ್ನೆಗೆ ಸಿದ್ದರಾಮಯ್ಯನವರು, “ಇಲ್ಲ ಸಾಧ್ಯವಿಲ್ಲ, ನಮ್ಮ ಶಾಸಕರು ಪಕ್ಷ ತೊರೆಯುವುದಿಲ್ಲ. ಒಬ್ಬನೇ ಒಬ್ಬ ಶಾಸಕ ಪಕ್ಷ ತೊರೆದು ಹೋಗುವುದಿಲ್ಲ” ಎಂದರು.
ತನ್ನ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.