ಬೆಂಗಳೂರು: ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿಗಳು ಸದ್ಯದಲ್ಲೇ ಉಪಚುನಾವಣೆ ಎದುರಾಗಲಿರುವ ಇನ್ನೆರಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯ ತಂತ್ರಕ್ಕೆ ಮುಂದಾಗಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳೂ ಚುನಾವಣೆಗೆ ಸನ್ನದ್ಧವಾಗಿವೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿ ಕುಮಾರ್ ಮಸ್ಕಿ ಕ್ಷೇತ್ರಕ್ಕೆ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಸವಕಲ್ಯಾಣ ಕ್ಷೇತ್ರಕ್ಕೆ ಶುಕ್ರವಾರ ಭೇಟಿ ನೀಡುತ್ತಿದ್ದು, ಕ್ಷೇತ್ರದಲ್ಲಿನ ವಸ್ತುಸ್ಥಿತಿ ಅರಿಯುವ ಪ್ರಯತ್ನ ಮಾಡಲಿದ್ದಾರೆ.
ಸಿಎಂ ಯಡಿಯೂರಪ್ಪ ಅವರು ಸದ್ಯದಲ್ಲೇ ಬಸವ ಕಲ್ಯಾಣ ಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಸಲುವಾಗಿ ದೀಪಾವಳಿ ಬಳಿಕ ಕ್ಷೇತ ಪ್ರವಾಸ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ನಿಶ್ಚಯವಾಗದ ಸಿಎಂ ಬಿಎಸ್‌ವೈ ದೆಹಲಿ ಪ್ರವಾಸ: ದೀಪಾವಳಿ ನಂತರ ‘ಲಾಬಿ’ ಡೆಲ್ಲಿಗೆ ಶಿಫ್ಟ್?
ಕಾಂಗ್ರೆಸ್ ಸಿದ್ಧತೆ: ಕಾಂಗ್ರೆಸ್ ಕೂಡ 3 ಕ್ಷೇತ್ರಗಳ ಉಪ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಮಸ್ಕಿ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಸಂಬಂಧ ಈಶ್ವರ್ ಖಂಡ್ರೆ ನೇತೃತ್ವದ ಸಮಿತಿ ನೀಡಿರುವ ವರದಿ ಆಧರಿಸಿ 2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರುವಿಹಾಳ ಅವರನ್ನು ಕಾಂಗ್ರೆಸ್‌ಗೆ ಸೇರಿಸಿ ಕೊಳ್ಳಲು ನಿರ್ಧರಿಸಲಾಗಿದೆ. ನ.22ರಂದು ಕಾಂಗ್ರೆಸ್ ಸೇರ್ಪಡೆಗೆ ನಿರ್ಧರಿಸಲಾಗಿದ್ದು, ಬಹುತೇಕ ಅವರೇ ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.
ಜೆಡಿಎಸ್ ಕಾರ್ಯತಂತ್ರ: ಮಸ್ಕಿ, ಬಸವಕಲ್ಯಾಣ ಉಪ ಚುನಾವಣೆ ಸಂಬಂಧ ಜೆಡಿಎಸ್ ಸಹ ಸಿದ್ಧತೆಯಲ್ಲಿ ತೊಡಗಿದೆ. ದೀಪಾವಳಿ ನಂತರ ಕ್ಷೇತ್ರಗಳ ಮುಖಂಡರು ಹಾಗೂ ಮಾಜಿ ಶಾಸಕರ ಸಭೆ ಕರೆದು ಚರ್ಚಿಸಲು ತೀರ್ಮಾನಿಸಲಾಗಿದೆ.