ಶಹಾಪುರ: ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿ ಬಿಟ್ಟರೆ ಈ ಪ್ರದೇಶದ ಜನರ ಕಲ್ಯಾಣ ಆಗುವುದಿಲ್ಲ. ಆ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಆಗಬೇಕು. ಆದರೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲಿಲ್ಲ. ಕಲ್ಯಾಣ ಭಾಗಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ಮುಂದೆ ಬಿಜೆಪಿ ಇದಕ್ಕೆ ತಕ್ಕ ಬೆಲೆ ಕಟ್ಟಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ದೋರನಹಳ್ಳಿ ಗ್ರಾಮದ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ದುರಾಡಳಿತ ನಡೆಯುತ್ತಿದೆ. ಅದು ಸಮರ್ಥವಾಗಿ ಸರ್ಕಾರ ನಡೆಸುವ ಸ್ಥಿತಿಯಲ್ಲಿಲ್ಲ. ಈ ಬಾರಿಯೂ ಸಚಿವ ಸಂಪುಟದಲ್ಲಿ ಕಲ್ಯಾಣ ಭಾಗಕ್ಕೆ ಮತ್ತೆ ಅನ್ಯಾಯವೆಸಗಿದೆ. ಇದರಿಂದ ಕಲ್ಯಾಣ ಭಾಗದ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ ಎಂದರು.
ಬಿಜೆಪಿಯಲ್ಲಿ ನಾಲ್ಕು ಹೈಕಮಾಂಡ್‌ಗಳಿವೆ: ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದರೆ ಒಂದೇ ಹೈ ಕಮಾಂಡ್ ಆಗಿರುತ್ತಿತ್ತು. ಆದರೆ ಅದಕ್ಕೆ ಬರೋಬ್ಬರಿ 4 ಹೈಕಮಾಂಡ್‌ಗಳಿವೆ. ದೆಹಲಿ ಹೈ ಕಮಾಂಡ್, ಕಾವೇರಿ ಹೈ ಕಮಾಂಡ್, ಆರ್‌ಎಸ್‌ಎಸ್ ಹೈ ಕಮಾಂಡ್, ಬಾಂಬೆ ಟೀಮ್ ಹೈ ಕಮಾಂಡ್. ಹೀಗಾಗಿ ಅಲ್ಲಿ ಅಭಿವೃದ್ಧಿಗಿಂತಲೂ ಅಧಿಕಾರ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.
ರೈತನ ಮೇಲೆ ಕೇಸ್‌ಗೆ ಖಂಡನೆ: ತಾಲೂಕಿನ ಕೊಳ್ಳುರು (ಎಂ) ಗ್ರಾಮಕ್ಕೆ ಜು. 24ರಂದು ಸಚಿವ ಆರ್. ಶಂಕರ ಭೇಟಿ ವೇಳೆ ರೈತರಿಗೆ ಕಳೆದ ಬಾರಿಯ ಪರಿಹಾರವೇ ನೀಡಿರುವುದಿಲ್ಲ. ಈ ಬಾರಿ ಪರಿಹಾರ ಯಾವಾಗ ರೈತರ ಕೈಸೇರಬೇಕೆಂದು ನೊಂದ ರೈತ ಬಸ್ಸಣ್ಣ ಭಂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಆ ರೈತನ ಮೇಲೆ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಇದು ಬಿಜೆಪಿ ದಬ್ಟಾಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಈ ಕುರಿತು ಜಿಲ್ಲಾಡಳಿತ ಸಮಾಲೋಚಿಸಿ ರೈತನ ಮೇಲೆ ದಾಖಲಾದ ಪ್ರಕರಣ ಇತ್ಯರ್ಥ ಪಡಿಸಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ಮಾಜಿ ಎಂಲ್ಸಿ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಮಾಣಿಕರೆಡ್ಡಿ ಕುರಕುಂದಿ, ಡಾ| ಭೀಮಣ್ಣ ಮೇಟಿ, ಮಂಜುಳಾ ಗೂಳಿ, ಮಾಜಿ ಕಾಡಾ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ, ಅವಿನಾಶ ಜಗನ್ನಾಥ, ಸುರೇಶ ಸಜ್ಜನ್, ಗಣಪತಿರಾವ ಜೋಳದ್ ಸೇರಿದಂತೆ ಇತರರಿದ್ದರು.