Advertisement

ಬಿಜೆಪಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಿಲ್ಲ: ಧ್ರುವನಾರಾಯಣ

08:52 PM Nov 27, 2021 | Team Udayavani |

 

Advertisement

ಹುಣಸೂರು: ಸಬ್ ಕೇ ಸಾತ್ ಸಬ್ ಕಾ ವಿಕಾಸ್ ಎಂದು ಹೇಳಿಕೊಳ್ಳುವ ಬಿಜೆಪಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಿಲ್ಲ. ಇನ್ನು ಜೆಡಿಎಸ್ ಅವಕಾಶವಾದಿ ಪಕ್ಷವಾಗಿದ್ದು, ಎರಡೂ ಪಕ್ಷಗಳನ್ನು ತಿರಸ್ಕರಿಸಿರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮನವಿ ಮಾಡಿದರು.

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಗರದ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಸ್ಥಳೀಯಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಪಂಚಾಯತ್ ರಾಜ್ ವ್ಯವಸ್ಥೆ, ಅಧಿಕಾರ ವಿಕೇಂದ್ರೀಕರಣದ ಮೇಲೆ ನಂಬಿಕೆ ಇರುವ ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯದಂತೆ ಎಲ್ಲ ವರ್ಗಗಳಿಗೂ ಟಿಕೆಟ್ ನೀಡಿದೆ. ಅದರಂತೆ ಜಿಲ್ಲೆಗೆ ಹುಣಸೂರಿನವರೇ ಆದ ಅರ್ಹ ಅಭ್ಯರ್ಥಿ ಡಾ.ತಿಮ್ಮಯ್ಯರಿಗೆ ಟಿಕೆಟ್ ನೀಡಿದ್ದ ಒಂದೇ ಮತ ಚಲಾಯಿಸುವ ಮೂಲಕ ಕೈ ಬಲಪಡಿಸಿರೆಂದು ಮನವಿ ಮಾಡಿದರು.

ಮೀಸಲಾತಿ ಕಲ್ಪಿಸಿದ್ದೇ ಕಾಂಗ್ರೆಸ್: ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿಯವರ ಅವಧಿಯಲ್ಲಿ ಸ್ಥಳೀಯಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.೫೦, ಎಸ್.ಸಿ-ಎಸ್.ಟಿಗೆ ಶೇ.೨೪,ಹಿಂದುಳಿದ ವರ್ಗಗಳಿಗೆ ಶೇ.೩೩ಮೀಸಲಾತಿ ನೀಡುವ ಮೂಲಕ ಪಂಚಾಯತ್‌ರಾಜ್‌ಗೆ ವಿಕೇಂದ್ರೀಕರಣಗೊಳಿಸುವ ಮೂಲಕ ಸಾಮಾಜಿಕನ್ಯಾಯ ಕಲ್ಪಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಪಂಚಾಯತ್ ವ್ಯವಸ್ಥೆಗೆ ಬಲತುಂಬಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೆಂದು ಸ್ಮರಿಸಿದರು.

ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ
ಚುನಾವಣೆ ಹೊತ್ತಿನಲ್ಲಿ ಸಚಿವ ಈಶ್ವರಪ್ಪ ಗ್ರಾ.ಪಂ.ಸದಸ್ಯರ ಗೌರವಧನ ಹೆಚ್ಚಿಸುತ್ತೇನೆನ್ನುತ್ತಾರೆ. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಇದ್ದರೂ ರೈತರಿಗೆ ಪ್ರಯೋಜನವಾಗಿಲ್ಲ. ಕೇಂದ್ರ-ರಾಜ್ಯ ಸರಕಾರಗಳಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಹಸಿವಿನ ಪ್ರಮಾಣ ಹೆಚ್ಚುತ್ತಿರುವುದು ನಾಚಿಗೆಗೇಡಿನ ಸಂಗತಿ ಎಂದು ಬಣ್ಣಿಸಿ, ಮಂಜುನಾಥರು ರಾಜ್ಯದಲ್ಲೇ ಮಾದರಿ ಶಾಸಕರಾಗಿದ್ದು, ಅವರ ಅಭಿವೃದ್ದಿ ಪರ್ವವನ್ನೇ ನಡೆಸಿದ್ದು, ಹೆಚ್ಚಿನ ಮತ ನೀಡುವ ಮೂಲಕ ಅವರ ಕೈ ಬಲಪಡಿಸಿರೆಂದರು.

Advertisement

ಜಿ.ಪಂ,ತಾ.ಪಂ.ಚುನಾವಣೆ ನಡೆಸಲು ಬಿಜೆಪಿ ಹಿಂದೇಟು
ಮಾಜಿಮಂತ್ರಿ ಎಚ್.ಸಿ.ಮಹದೇವಪ್ಪ ಮಾತನಾಡಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸಿ, ಹೆಚ್ಚಿನ ಅಧಿಕಾರ ನೀಡಿದ್ದು ಕಾಂಗ್ರೆಸ್, ಆದರೆ ಗ್ರಾಮಸ್ವರಾಜ್ ಮೇಲೆ ನಂಬಿಕೆ ಇಲ್ಲದ ಬೆಜೆಪಿ ಸರಕಾರವು ಜಿ.ಪಂ-ತಾ.ಪA. ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ. ಬಿಜೆಪಿಯು ಧರ್ಮದೊಳಗೆ ರಾಜಕೀಯ-ರಾಜಕೀಯದೊಳಗೆ ಧರ್ಮ ಬೆರೆಸಿ ಅಧಿಕಾರ ಹಿಡಿಯುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತಿದೆ. ಮನಮೋಹನ್‌ಸಿಂಗ್ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ನರೇಗಾ, ಆಹಾರ ಭದ್ರತಾ ಯೋಜನೆಯಿಂದ ಹಾಗೂ ಸಿದ್ದರಾಮಯ್ಯರ ಬದ್ದತೆಯ ಆಡಳಿತದಿಂದ ಇಂದು ಸ್ಥಳೀಯ ಸಂಸ್ಥೆಗಳು ಬಲಗೊಂಡಿವೆ. ಎರಡೂ ಸರಕಾರಗಳು ಕಳೆದ ಮೂರುವರ್ಷಗಳಿಂದ ಬಡವರಿಗೆ ಸೂರನ್ನೇ ನೀಡಿಲ್ಲವೆಂದು ಆರೋಪಿಸಿದರು.

ಬಜೆಟ್ ನಂತರ ಸರಕಾರ ಪತನ
ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮ ನಡೆದರೆ ಪಂಚಾಯತ್‌ರಾಜ್ ಚಳುವಳಿ ಆಗುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು. ಬಜೆಟ್ ನಂತರ ಈ ಪರ್ಸಂಟೇಜ್ ಸರಕಾರದ ದುರಾಡಳಿತ ಅಂತ್ಯಗೊಳ್ಳಲಿದ್ದು ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸವ್ಯಕ್ತಪಡಿಸಿ, ಶಾಸಕ ಮಂಜುನಾಥರು ಚುನಾವಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿದ್ದು, ಡಾ.ತಿಮ್ಮಯ್ಯರನ್ನು ಚುನಾಯಿಸುವಂತೆ ಮನವಿ ಮಾಡಿದರು.

ಹೆಸರು ಬದಲಾಯಿಸುವುದೇ ಬಿಜೆಪಿ ದೊಡ್ಡ ಸಾಧನೆ: ಶಾಸಕ ಮಂಜುನಾಥ್

ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಸಿದ್ದರಾಮಯ್ಯರ ಸೂಚನೆಯಂತೆ ಅರ್ಹ ಅಭ್ಯರ್ಥಿ ಡಾ.ತಿಮ್ಮಯ್ಯರಿಗೆ ಮಾತ್ರ ಒಂದು ಮತ ಚಲಾಯಿಸಬೇಕೆಂದು ಮನವಿ ಮಾಡಿದ ಅವರು, ಬಿಜೆಪಿಯು ದೇಶವನ್ನು ಅಧೋಗತಿಗೆ ಕೊಂಡೊಯ್ಯುತ್ತಿದೆ. ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ.ಕಾಂಗ್ರೆಸ್ ಪಕ್ಷ ಸಿದ್ದಾಂತಗಳಲ್ಲಿ ನಂಬಿಕೆ ಇದ್ದು, ಆಗತಂದ ಪ್ರಗತಿಪರ ಯೋಜನೆಗಳಿಗೆ ಹೆಸರು ಬದಲಾಯಿಸುವುದೇ ಬಿಜೆಪಿಯ ದೊಡ್ಡ ಸಾಧನೆ. ಬಿಜೆಪಿಗೆ ಮತಹಾಕಿದರೆ ಆತ್ಮವಂಚನೆ ಮಾಡಿಕೊಂಡಂತೆ ಎಂದು ಎಚ್ಚರಿಸಿ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ ಮಾರಿಕೊಂಡು ಆತ್ಮವಂಚನೆ ಮಾಡಿಕೊಳ್ಳದಿರಿ, ಪಕ್ಷಕ್ಕೆ ಮೋಸಮಾಡದಿರಿ, ರಾಜ್ಯದ ಭವಿಷ್ಯದ ಹಿತದೃಷ್ಟಿಯಿಂದ ಪಕ್ಷದ ಅಭ್ಯರ್ಥಿಗೆ ಮಾತ್ರ ಮತಹಾಕಿ ನಿಷ್ಟೆ ಪ್ರದರ್ಶಿಸಿರಿ, ಮುಂದೆ ಮತ ಹಾಕುವ ಬಗ್ಗೆ ತರಬೇತಿ ನೀಡಲಾಗುವುದೆಂದರು.

ಅಭ್ಯರ್ಥಿ ಡಾ.ತಿಮ್ಮಯ್ಯ ಮತಯಾಚಿಸಿದರು. ಶಾಸಕ ಎಚ್.ಪಿ.ಮಂಜುನಾಥ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಅಮರ್‌ನಾಥ್, ಎಂ.ಎಲ್.ಸಿ.ಧರ್ಮಸೇನಾ, ಟಿಎಪಿಸಿಎಂಎಸ್ ಅಧ್ಯಕ್ಷ ಕೆಂಪೇಗೌಡ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಸಭೆ ಅಧ್ಯಕ್ಷೆ ಸೌರಭಸಿದ್ದರಾಜು, ಉಪಾಧ್ಯಕ್ಷ ದೇವನಾಯ್ಕ, ಕಾಂಗ್ರೆಸ್ ಅಧ್ಯಕ್ಷರಾದ ನಾರಾಯಣ್, ದೇವರಾಜ್, ರಮೇಶ್, ಹಂದನಹಳ್ಳಿಸೋಮಶೇಖರ್, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಮುಖಂಡರು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next