ಮೈಸೂರು: ‘ಬಿಜೆಪಿ 10 ವರ್ಷದ ಹಿಂದೆ ನನಗೆ ಟಿಕೆಟ್ ಕೊಡುವಾಗ ಪಕ್ಷ ಯಾರನ್ನೂ ಕೇಳಿರಲಿಲ್ಲ, 10 ವರ್ಷದ ನಂತರ ಬೇರೆಯವರಿಗೆ ಟಿಕೆಟ್ ಕೊಡುವಾಗ ಕಾರಣ ಹೇಳಬೇಕಾದ ಅಗತ್ಯ ಪಕ್ಷಕ್ಕಿಲ್ಲ’ ಎಂದು ಸಂಸದ ಪ್ರತಾಪ್ ಸಿಂಹ ಸೋಮವಾರ ಹೇಳಿಕೆ ನೀಡಿದ್ದಾರೆ.
ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ “ಮಾಧ್ಯಮ ಸಂವಾದ” ‘ಸಂಕಲ್ಪ ಪತ್ರಕ್ಕೆ ನಿಮ್ಮ ಸಲಹೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
”ನನಗೆ 10 ವರ್ಷದ ಹಿಂದೆ ನನಗೆ ಟಿಕೆಟ್ ಕೊಡುವಾಗ ಯಾರನ್ನಾದರೂ ಪಕ್ಷ ಕೇಳಿತ್ತಾ? ನಾನು ಸೂಕ್ತ ಅಭ್ಯರ್ಥಿ ಎಂದು ಪಕ್ಷ ನನಗೆ ಟಿಕೆಟ್ ಕೊಟ್ಟು ಗೆಲ್ಲಿಸಿತು. ಈಗಲೂ ಟಿಕೆಟ್ ಕುರಿತಾಗಿ ಕಾರಣ ಹೇಳಬೇಕಾದ ಅಗತ್ಯ ಇಲ್ಲ” ಎಂದರು.
”ನಾನು ಸಂಸದನಾಗಿ ಹತ್ತು ವರ್ಷದಲ್ಲಿ ನಿರೀಕ್ಷೆ ಮೀರಿ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಮಾತ್ರವಲ್ಲದೆ ಬೇರೆ ಕಡೆಗಳಲ್ಲೂ ಸಹಾನುಭೂತಿ ವ್ಯಕ್ತವಾಗಿದೆ. ಪಕ್ಷ ಸಂಘಟನೆಗೂ ನನ್ನನ್ನು ಬಳಸಿಕೊಳ್ಳಬಹುದು. ಕಾರ್ಯಕರ್ತರೊಂದಿಗೆ ಕೆಲಸ ಮಾಡುತ್ತೇನೆ. ಯದುವೀರ್ ಅವರನ್ನು ಗೆಲ್ಲಿಸಿಕೊಂಡು ಬರುವುದೇ ನನ್ನ ಮುಂದಿರುವ ಗುರಿ” ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಸೇರಿ ಬಿಜೆಪಿ ಪ್ರಮುಖ ನಾಯಕರು ಉಪಸ್ಥಿತರಿದ್ದರು.