Advertisement

ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಪುತ್ತೂರು ಮೂಲದ ರಾಜೇಶ್ ಆಯ್ಕೆ

08:34 PM Jul 19, 2022 | Team Udayavani |

ಬೆಂಗಳೂರು : ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಅವರನ್ನು ಬದಲಾಯಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

ಅರುಣ್ ಕುಮಾರ್ ಅವರ ಸ್ಥಾನಕ್ಕೆ ಪುತ್ತೂರು ಮೂಲದ ಆರ್ ಎಸ್ ಎಸ್ ಪ್ರಚಾರಕ ರಾಜೇಶ್ ಅವರನ್ನು ನಿಯೋಜಿಸಲಾಗಿದೆ. ಅರುಣ್ ಕುಮಾರ್ ಅವರ ಬದಲಾವಣೆ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲವಾದರೂ ಪಕ್ಷದ ಮೂಲಗಳು ಖಚಿತಪಡಿಸಿವೆ.

ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಸಂಘಟನಾತ್ಮಕವಾಗಿ ಆಗಸ್ಟ್ ತಿಂಗಳಲ್ಲಿ‌ ಮಹತ್ತರ ಬದಲಾವಣೆ ನಿರೀಕ್ಷಿಸಲಾಗಿತ್ತು. ಆದರೆ‌ ಹದಿನೈದು ದಿ‌ನ ಮುಂಚಿತವಾಗಿಯೇ ಈ ಬೆಳವಣಿಗೆ ನಡೆದಿದೆ. ಚುನಾವಣಾ ವರ್ಷದಲ್ಲಿ ಬಿಜೆಪಿಯಲ್ಲಿ ಸಂಘಟನಾ ಕಾರ್ಯದರ್ಶಿ ಪಾತ್ರ ಮಹತ್ತರವಾಗಿರುತ್ತದೆ.

ಈಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಬಿ.ಎಲ್.ಸಂತೋಷ್ ಅವರು ಎಂಟು ವರ್ಷಗಳ ಕಾಲ‌ ಈ ಆಯಕಟ್ಟಿನ ಸ್ಥಾನವನ್ನು ನಿಭಾಯಿಸಿದ್ದರು.

ಆರ್‌ಎಸ್‌ಎಸ್‌ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಸಮನ್ವಯ ಬೈಠಕ್‌ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಮಂಗಳವಾರ ನಡೆಯಿತು, ಅಲ್ಲಿ ಒಟ್ಟು ಐವರು ಪ್ರಚಾರಕರ ಜವಾಬ್ದಾರಿಗಳಲ್ಲಿ ಬದಲಾವಣೆ ಮಾಡಲಾಗಿದೆ.

Advertisement

ಅರುಣ್‌ ಕುಮಾರ್‌ ಅವರು ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡಿದರು. ಶಿಕ್ಷಣದ ನಂತರ ಆರ್‌ಎಸ್‌ಎಸ್‌ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಆರು ವರ್ಷದ ಹಿಂದೆ ಬಿಜೆಪಿಗೆ ನಿಯುಕ್ತಿ ಮಾಡಲಾಗಿತ್ತು. ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಹೊಣೆ ನೀಡಲಾಗಿತ್ತು. ಇನ್ನುಮುಂದೆ ಅರುಣ್‌ಕುಮಾರ್‌ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರಾಗಿ ಕಾರ್ಯನಿರ್ವಹಿಸಲಿದ್ದಾರೆ.

ರಾಜೇಶ್‌ ಬಿಜೆಪಿಗೆ
ಆರ್‌ಎಸ್‌ಎಸ್‌ ಪ್ರಚಾರಕರಾದ ರಾಜೇಶ್‌ ಅವರನ್ನು ರಾಜಕೀಯ ಕ್ಷೇತ್ರಕ್ಕೆ ನಿಯೋಜನೆ ಮಾಡಲಾಗಿದೆ. ಅವರು ಬಿಜೆಪಿಗೆ ನಿಯುಕ್ತಿಯಾಗಿದ್ದು, ಸಂಘಟನೆಯನ್ನು ಸೇರಿದ ನಂತರ ಹೊಸ ಹೊಣೆಯನ್ನು ನೀಡಲಾಗುತ್ತದೆ. ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಕನ್ನಡ ಮೂಲದವರಾದ ರಾಜೇಶ್‌ ತಮ್ಮ ವಿದ್ಯಾಭ್ಯಾಸದ ನಂತರ ಆರ್‌ಎಸ್‌ಎಸ್‌ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮೈಸೂರು ಜಿಲ್ಲಾ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. 2021ರಲ್ಲಿ ತುಮಕೂರು ವಿಭಾಗ ಪ್ರಚಾರಕರಾಗಿ ನಿಯುಕ್ತಿಯಾಗಿದ್ದರು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಇನ್ನು ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ನಡೆಯಲಿದ್ದು, ಈ ಸಮಯದಲ್ಲಿ ಸಂಘಟನಾ ಕಾರ್ಯದರ್ಶಿ ಬದಲಾವಣೆ ಅಚ್ಚರಿಗೆ ಕಾರಣವಾಗಿದೆ.

ಒಟ್ಟು ಐವರು ಬದಲಾವಣೆ
ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ಒಟ್ಟು ಐವರು ಜವಾಬ್ದಾರಿಗಳನ್ನು ಬದಲಾವಣೆ ಮಾಡಲಾಗಿದೆ.
1. ಗ.ರಾ. ಸುರೇಶ್ : ಸಾಮರಸ್ಯ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಟೋಳಿ ಸದಸ್ಯರು. ಹಾಗೂ ಘುಮಂತು (ಅಲೆಮಾರಿ ಸಮುದಾಯ) ಕಾರ್ಯದ ಕರ್ನಾಟಕ ರಾಜ್ಯ ಪ್ರಮುಖರು.
2. ಶಿ.ಲ. ಕೃಷ್ಣಮೂರ್ತಿ : ಹಿಂದು ಸೇವಾ ಪ್ರತಿಷ್ಠಾನ
3. ಮನೋಹರ ಮಠದ್ : ಕರ್ನಾಟಕ ದೇವಸ್ಥಾನ ಸಂವರ್ಧನ ಸಮಿತಿ ರಾಜ್ಯ ಸಂಯೋಜಕರು
4. ಅರುಣ್ ಕುಮಾರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರು
5. ರಾಜೇಶ್ : ರಾಜನೈತಿಕ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next