Advertisement

ಬಿಜೆಪಿ: ನವಕರ್ನಾಟಕ ನಿರ್ಮಾಣ ರಥಯಾತ್ರೆ

06:25 AM Aug 27, 2017 | Harsha Rao |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಬಿಜೆಪಿ “ನವಕರ್ನಾಟಕ ನಿರ್ಮಾಣ ಪರಿ ವರ್ತನ ಯಾತ್ರೆ’ ಎಂಬ ರಥಯಾತ್ರೆ ಆಯೋಜಿಸಲು ತೀರ್ಮಾನಿಸಿದೆ.

Advertisement

ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರ ಗಳಿಗೂ ಈ ಯಾತ್ರೆ ತೆರಳಲಿದೆ. ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿಯ ಸಂಕಲ್ಪಗಳೇನು ಮತ್ತು ಪ್ರಸ್ತುತ ರಾಜ್ಯದಲ್ಲಿರುವ ಕಾಂಗ್ರೆಸ್‌ ಸರಕಾರದ ಭ್ರಷ್ಟಾಚಾರ, ಜನವಿರೋಧಿ ಆಡಳಿತದ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ.

ದಿಲ್ಲಿಯಲ್ಲಿ ಶನಿವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಯಾತ್ರೆಯ ರೂಪುರೇಷೆಗಳು ಮತ್ತು ಹೊರಡುವ ದಿನಾಂಕದ ಕುರಿತು ಬೆಂಗಳೂರಿನಲ್ಲಿ ಮತ್ತೂಂದು ಸುತ್ತಿನ ಸಭೆ ನಡೆಸಿ ನಿರ್ಧರಿಸಲಾಗುತ್ತದೆ.

ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಅಮಿತ್‌ ಶಾ ಅವರು ಪಕ್ಷ ಸಂಘಟನೆ ಮತ್ತು ಚುನಾವಣಾ ಸಿದ್ಧತೆಗಳ ಬಗ್ಗೆ ರಾಜ್ಯ ನಾಯಕರಿಗೆ ಹಲವು ಸೂಚನೆ ಗಳನ್ನು ನೀಡಿದ್ದು, ಇದನ್ನು ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆಯೇ ಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆದಿದೆ. ಪಕ್ಷ ಸಂಘಟನೆ ನಿಟ್ಟಿನಲ್ಲಿ ರಾಜ್ಯದಲ್ಲಿರುವ 57 ಸಾವಿರಕ್ಕೂ ಹೆಚ್ಚು ಬೂತ್‌ಗಳಲ್ಲಿ 9 ಸದಸ್ಯರ ನ್ನೊಳಗೊಂಡ ಬೂತ್‌ ಕಮಿಟಿಯನ್ನು ಕಡ್ಡಾಯವಾಗಿ ರಚಿಸಬೇಕು. ಈ ಸಮಿತಿಯಲ್ಲಿ ಅಧ್ಯಕ್ಷರು, ಕಾರ್ಯ ದರ್ಶಿ ಸಹಿತ ತಲಾ ಇಬ್ಬರು ಮಹಿಳೆ ಯರು, ಪರಿಶಿಷ್ಟ ಜಾತಿ, ಪಂಗಡದ ವರು, ಹಿಂದುಳಿದವರು ಇರಬೇಕು ಎಂದು  ಶಾ ಸೂಚನೆ ನೀಡಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪೂರ್ಣಾವಧಿ ಕಾರ್ಯಕರ್ತ: ಇದಲ್ಲದೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಪೂರ್ಣಾವಧಿ ಕಾರ್ಯಕರ್ತನನ್ನು ನೇಮಿಸುವಂತೆಯೂ ಅಮಿತ್‌ ಶಾ ಸೂಚಿಸಿದ್ದಾರೆ. ಆತ ಅ. 1ರಿಂದ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಆಯಾ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಪಕ್ಷ ಸಂಘಟನೆ, ಚುನಾವಣಾ ಸಿದ್ಧತೆ ಮತ್ತು ಕಾರ್ಯತಂತ್ರಗಳ ಅನುಷ್ಠಾನದ ಬಗ್ಗೆ ಗಮನಹರಿಸಿ ಈ ಕುರಿತು ರಾಜ್ಯ ಘಟಕಕ್ಕೆ ವರದಿ ಸಲ್ಲಿಸಬೇಕು.

Advertisement

ಪಕ್ಷ ಸಂಘಟನೆ ದೃಷ್ಟಿಯಿಂದ ಪ್ರತಿ ಬೂತ್‌ ಮಟ್ಟದಲ್ಲಿ ಮತ್ತು ವಿಭಾಗ ಮಟ್ಟದಲ್ಲಿ ಕಾರ್ಯಕರ್ತರ ಸಮಾವೇಶಗಳನ್ನು ನಡೆಸಬೇಕು. ಇದರ ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ, ಮಹಿಳಾ ಮೋರ್ಚಾ ಸಹಿತ ಪಕ್ಷದ ಎಲ್ಲ ಮೋರ್ಚಾಗಳ ಸಮಾವೇಶಗಳನ್ನು ರಾಜ್ಯ, ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವಾರು ಮಟ್ಟದಲ್ಲಿ ಆಯೋಜಿಸಬೇಕು. ಆ ಮೂಲಕ ರಾಜ್ಯ ಸರಕಾರದ ಭ್ರಷ್ಟಾಚಾರ, ಜನವರೋಧಿ ನೀತಿಗಳನ್ನು ಜನರಿಗೆ ತಲುಪಿಸುವುದರ ಜತೆಗೆ ಕೇಂದ್ರ ಸರಕಾರದ ಸಾಧನೆಗಳನ್ನು ತಿಳಿಸುವ ಕೆಲಸ ಮಾಡುವಂತೆಯೂ ಅಮಿತ್‌ ಶಾ ತಾಕೀತು ಮಾಡಿದ್ದಾರೆ.

ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‌ಲಾಲ್‌, ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾಬ್ಡೇಕರ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಕೋರ್‌ ಕಮಿಟಿ ಸದಸ್ಯರು ಹಾಜರಿದ್ದರು.

ಶಾಸಕರು, ಸಂಸದರಿಗೆ ಹೆಚ್ಚುವರಿ ಜವಾಬ್ದಾರಿ ಪಕ್ಷದಿಂದ ಆಯ್ಕೆಯಾಗಿರುವ ರಾಜ್ಯದ ಸಂಸದರು, ವಿಧಾನಸಭೆ ಸದಸ್ಯರು ಮತ್ತು ವಿಧಾನ ಪರಿಷತ್‌ ಸದಸ್ಯರಿಗೆ ಅಮಿತ್‌ ಶಾ ಅವರು ಹೆಚ್ಚುವರಿ ಜವಾಬ್ದಾರಿ ನೀಡಿದ್ದಾರೆ. ಒಬ್ಬ ಸಂಸದ ತನ್ನ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ಜತೆಗೆ ಇನ್ನೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಅದೇ ರೀತಿ ಒಬ್ಬ ಶಾಸಕ ತನ್ನ ಕ್ಷೇತ್ರದ ಜತೆಗೆ ಇನ್ನೂ ಎರಡು ಕ್ಷೇತ್ರಗಳಲ್ಲಿ ಜವಾಬ್ದಾರಿ ನೋಡಿಕೊಳ್ಳಬೇಕು. ಒಬ್ಬ ವಿಧಾನ ಪರಿಷತ್‌ ಸದಸ್ಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡಬೇಕು ಎಂದು ಅಮಿತ್‌ ಶಾ ಸೂಚನೆ ನೀಡಿದ್ದಾರೆ.

ಅದೇ ರೀತಿ ಪಕ್ಷದ ಕೋರ್‌ ಕಮಿಟಿಯಲ್ಲಿರುವ 13 ಸದಸ್ಯರು ಪ್ರತಿ ಮೂರು ಜಿಲ್ಲೆಗೆ ಒಬ್ಬರಂತೆ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಆ ಮೂಲಕ ತಮ್ಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ರಾಜ್ಯ ಘಟಕಕ್ಕೆ ವರದಿ ಮಾಡಬೇಕು ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next