ಬಳ್ಳಾರಿ: ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಮಟ್ಟದ “ನವಶಕ್ತಿ ಸಮಾವೇಶ’ಕ್ಕೆ ಕ್ಷಣಗಣನೆ ಆರಂಭವಾಗಿದೆ.
ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ -ಬಹಿರಂಗ ಸಭೆಗೆ ಸೆಡ್ಡು ಹೊಡೆಯಲು ಬೃಹತ್ ವೇದಿಕೆ ಸಿದ್ಧ ಗೊಂಡಿದೆ. ಗಣಿನಾಡು ಬಳ್ಳಾರಿ ನಗರ ಕೇಸರಿ ನಾಡಾಗಿ ಕಂಗೊಳಿಸುತ್ತಿದೆ.
ಸರಕಾರ ಪರಿಶಿಷ್ಟ ಸಮು ದಾಯದ ಮೀಸಲಾತಿ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಅದರ ಲಾಭ ಪಡೆದು ಕೊಳ್ಳಲು ರವಿವಾರ ಈ ಸಮಾವೇಶ ನಡೆಯುತ್ತಿದ್ದು, ಅದ್ದೂರಿಯಾಗಿ ಆಯೋಜಿ ಸಲಾಗಿದೆ. ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಸಮಾವೇಶದ ಯಶಸ್ಸಿಗೆ ಪಣ ತೊಟ್ಟಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಎಸ್‌ಟಿ ಮೋರ್ಚಾ ರಾ. ಅಧ್ಯಕ್ಷರು, ಶಾಸಕರು, ಸಚಿವರು, ಪಕ್ಷದ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಆಗಮಿಸಲಿದ್ದಾರೆ. ಸಮಾವೇಶದ ಬೃಹತ್ ವೇದಿಕೆಯಲ್ಲಿ ಮಹರ್ಷಿ ವಾಲ್ಮೀಕಿಯ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ.
ಈ ಸಮಾವೇಶಕ್ಕಾಗಿ ಮೂರು ಪ್ರತ್ಯೇಕ ವೇದಿಕೆಗಳನ್ನು ನಿರ್ಮಿಸಲಾಗಿದೆ. ಪ್ರಮುಖ ವೇದಿಕೆಯಲ್ಲಿ ರಾಷ್ಟ್ರೀಯ ನಾಯಕರ ಸಹಿತ 40 ಗಣ್ಯರಿಗಷ್ಟೇ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಮತ್ತೂಂದು ವೇದಿಕೆಯಲ್ಲಿ ರಾಜ್ಯ ನಾಯಕರು, ಶಾಸಕರು, ಸಂಸದರಿಗೆ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 150 ಕಲಾತಂಡ ಗಳು ಭಾಗವಹಿಸಲಿವೆ.
ನಗರದ ಹೊಸಪೇಟೆ ರಸ್ತೆ, ಕೌಲ್‌ಬಜಾರ್ ಸಹಿತ ಪ್ರಮುಖ ರಸ್ತೆಗಳಲ್ಲಿ ರಸ್ತೆ ಎರಡು ಬದಿ, ರಸ್ತೆ ವಿಭಜಕಗಳಲ್ಲಿ ಬಿಜೆಪಿ ಬಾವುಟಗಳನ್ನು ಅಳವಡಿಸಲಾಗಿದೆ. ಜತೆಗೆ ಪ್ರಮುಖ ವೃತ್ತಗಳಾದ ಮೋತಿ ವೃತ್ತ, ಎಸ್‌ಪಿ ವೃತ್ತಗಳಲ್ಲೂ ಕೇಸರಿ ಬಾವುಟಗಳನ್ನು ಕಟ್ಟಲಾಗಿದೆ. ವೇದಿಕೆ ಸುತ್ತಮುತ್ತ ಬೃಹತ್ ಕಟೌಟ್‌ಗಳು ತಲೆಯೆತ್ತಿದ್ದು, ನಗರ ಸೇರಿ ಹೊರವಲಯದ ಸುಮಾರು 30 ಕಿ.ಮೀ.ವರೆಗೆ ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ ಗ್ರಾಮೀಣ ಭಾಗದ ಜನರಲ್ಲೂ ಸಮಾವೇಶದ ಕುರಿತು ಜಾಗೃತಿ ಮೂಡಿಸಲಾಗಿದೆ.
ಈ ಸಮಾವೇಶದ ಸಿದ್ಧತೆಗಾಗಿ 41 ವಿವಿಧ ಸಮಿತಿಗಳನ್ನು ರಚನೆಮಾಡಿದ್ದ ಬಿಜೆಪಿ, ಎರಡನೇ ಹಂತದ ಸುಮಾರು ಮೂರು ಸಾವಿರ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಳಸಿಕೊಂಡಿದ್ದು, ವಿವಿಧ ಜವಾಬ್ದಾರಿಗಳನ್ನು ವಹಿಸಿದೆ. ಊಟದ ವ್ಯವಸ್ಥೆಗೆ ಪ್ರತ್ಯೇಕ ಪೆಂಡಾಲ್ ನಿರ್ಮಿಸಲಾಗಿದ್ದು, ಸುಮಾರು 200 ಆಹಾರ ವಿತರಣ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.