ಮೈನ್‌ಪುರಿ : ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಸೋಮವಾರದ ವಿದ್ಯಮಾನದಲ್ಲಿ ಮಾಜಿ ಮುಖ್ಯಮಂತ್ರಿ , ಎಸ್ ಪಿ ಪ್ರಮುಖ ಅಖಿಲೇಶ್ ಯಾದವ್ ವಿರುದ್ಧ ಕೇಂದ್ರ ಸಚಿವ ಮತ್ತು ಆಗ್ರಾ ಸಂಸದ ಎಸ್‌ಪಿ ಸಿಂಗ್ ಬಘೇಲ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಇಂದು ಮುಂಜಾನೆ ಅಖಿಲೇಶ್ ಯಾದವ್ ಕರ್ಹಾಲ್ ನಲ್ಲಿ ನಾಮಪತ್ರ ಸಲ್ಲಿಸಿದ್ದರು. ಆ ಬಳಿಕ ಎಸ್‌ಪಿ ಸಿಂಗ್ ಬಘೇಲ್ ನಾಮಪತ್ರ ಸಲ್ಲಿಸಿದ್ದಾರೆ.
ಬಘೇಲ್ ಅವರು ಮುಲಾಯಂ ಯುವ ಬ್ರಿಗೇಡ್‌ನ ಅಧ್ಯಕ್ಷರಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದರು ಈಗ ವಿಲೀನಗೊಂಡ ಜಲೇಸರ್ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಸಂಸದರಾಗಿ ಮೂರು ಬಾರಿ ಗೆದ್ದಿದ್ದರು.
ಕೇಂದ್ರ ಸಂಪುಟದಲ್ಲಿ ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವರಾಗಿರುವ ಬಘೇಲ್ ಅವರು 2015 ಮತ್ತು 2016 ರ ನಡುವೆ ಬಿಜೆಪಿಯ ಒಬಿಸಿ (ಇತರ ಹಿಂದುಳಿದ ಸಮುದಾಯ) ಮೋರ್ಚಾದ ಮುಖ್ಯಸ್ಥರಾಗಿದ್ದರು.
ಬಾಘೆಲ್ ಅವರು ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ನಿಕಟ ವಿಶ್ವಾಸಿಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಡಿಂಪಲ್ (ಅಖಿಲೇಶ್ ಅವರ ಪತ್ನಿ) ಮತ್ತು ಅಕ್ಷಯ್ ಯಾದವ್ ಸೇರಿದಂತೆ ಅವರ ಕುಟುಂಬ ಸದಸ್ಯರ ವಿರುದ್ಧವೇ ಎರಡು ಬಾರಿ ಸ್ಪರ್ಧಿಸಿ ಸೋತಿದ್ದರು.