ಮಣಿಪುರ:ಮಣಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಸಲ್ಲಿಸುವುದಾಗಿ ಸಿಎಂ ಇಬೋಬಿ ಸಿಂಗ್ ಸೋಮವಾರ ಘೋಷಿಸಿದ ಬೆನ್ನಲ್ಲೇ, ಎನ್.ಬಿರೇನ್ ಸಿಂಗ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಆಯ್ಕೆ ಮಾಡಿದೆ.
ಬಿಜೆಪಿ ಶಾಸಕರು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಎನ್.ಬಿರೆನ್ ಸಿಂಗ್(55ವರ್ಷ) ಅವರನ್ನು ಆಯ್ಕೆ ಮಾಡಲಾಗಿದೆ. 60 ಮಂದಿ ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳಲ್ಲಿ, ಬಿಜೆಪಿ 21 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಏತನ್ಮಧ್ಯೆ ಹಾಲಿ ಸಿಎಂ ಇಬೋಬಿ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಂದಿನ ಹೊಸ ಸರ್ಕಾರ ರಚನೆಗೆ ಅವಕಾಶ ಕೊಡಬೇಕೆಂದು ಮಣಿಪುರ ರಾಜ್ಯಪಾಲರು ಸೂಚಿಸಿದ್ದರು. ಆದರೆ ಇಬೋಬಿ ಸಿಂಗ್ ರಾಜೀನಾಮೆ ನೀಡಲು ನಿರಾಕರಿಸಿ, ಕಾಂಗ್ರೆಸ್ ಪಕ್ಷಕ್ಕೂ ಸರ್ಕಾರ ರಚಿಸುವ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದರು.
ಆದರೆ ಪಕ್ಷೇತರವಾಗಿ ಗೆದ್ದಿದ್ದ 10 ಮಂದಿ ಬಿಜೆಪಿಗೆ ಬೆಂಬಲ ನೀಡಿದ್ದ ಹಿನ್ನೆಲೆಯಲ್ಲಿ ಬಹುಮತ ಸಾಬೀತುಪಡಿಸಲು ಬೇಕಾದ 31 ಸದಸ್ಯ ಬಲ ಪಡೆದಿತ್ತು. ಇದರಿಂದಾಗಿ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು. ರಾಜ್ಯಪಾಲರ ಈ ಕ್ರಮಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು.
ಗೋವಾದಲ್ಲೂ ಬಿಜೆಪಿ ಸರ್ಕಾರ:
ಗೋವಾದಲ್ಲಿಯೂ ಕಾಂಗ್ರೆಸ್ 17 ಸ್ಥಾನ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ 13 ಸ್ಥಾನ ಪಡೆದ ಬಿಜೆಪಿ, ಇತರ 10 ಶಾಸಕರ ಬೆಂಬಲ ಪಡೆದು ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ್ದು, ಈಗಾಗಲೇ ರಕ್ಷಣಾ ಖಾತೆಗೆ ರಾಜೀನಾಮೆ ನೀಡಿರುವ ಮನೋಹರ್ ಪರ್ರೀಕರ್ ಅವರು ಮಂಗಳವಾರ ಗೋವಾದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.