ಹೊಸದಿಲ್ಲಿ: ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಪ್ರಕಟಿಸಿದೆ. ಭಾರತೀಯ ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಮೊದಲೇ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿರುವುದು ಇದೇ ಮೊದಲು.
90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಗೆ 21 ಮತ್ತು 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ 39 ಅಭ್ಯರ್ಥಿಗಳನ್ನು ಪಕ್ಷ ಘೋಷಿಸಿದೆ.
ಬಿಜೆಪಿಯ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿ, ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಕಾರ್ಯತಂತ್ರಗಳ ತಯಾರಿಗಾಗಿ ಪಕ್ಷದ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯ ಸಭೆಯ ನಂತರ ಈ ಘೋಷಣೆ ಮಾಡಲಾಗಿದೆ.
ಬಂಡಾಯ ಅಭ್ಯರ್ಥಿಗಳ ಸಮಸ್ಯೆಗಳನ್ನು ಮುಂಚಿತವಾಗಿ ಪರಿಹರಿಸಬಹುದಾದ ಕಾರಣಕ್ಕೆ ಅಭ್ಯರ್ಥಿಗಳ ಹೆಸರನ್ನು ಮೊದಲೇ ಘೋಷಿಸುವ ನಿರ್ಧಾರಕ್ಕೆ ಬಿಜೆಪಿ ನಾಯಕತ್ವ ಮುಂದಾಗಿದೆ.
ಈ ವರ್ಷದ ಆರಂಭದಲ್ಲಿ ಕರ್ನಾಟಕದಲ್ಲಿ ಚುನಾವಣೆ ಹಿನ್ನಡೆಯಾದ ನಂತರ, ಪಕ್ಷವು ಹೊಸ ಯೋಜನೆಗಳತ್ತ ಮುಖ ಮಾಡಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ಹೀಗೆ ಈ ವರ್ಷದ ಕೊನೆಯಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.
ಇವುಗಳ ಪೈಕಿ ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಪ್ರತಿಪಕ್ಷಗಳು ಆಡಳಿತ ನಡೆಸುತ್ತಿವೆ.