Advertisement

ನಮ್ಮ ಗ್ಯಾರಂಟಿ ಕದ್ದು ಮೋದಿ ಹೆಸರಿಟ್ಟ ಬಿಜೆಪಿ: ಸಿಎಂ ಸಿದ್ದರಾಮಯ್ಯ

11:36 PM Mar 23, 2024 | Team Udayavani |

ಬೆಂಗಳೂರು: ನಮ್ಮ ಸಾಧನೆಗಳನ್ನು ಬಿಜೆಪಿಯು ತನ್ನ ಸಾಧನೆಗಳೆಂದು ಅತ್ಯಂತ ನಿರ್ಲಜ್ಜದಿಂದ ಹೇಳಿಕೊಂಡು ಬರುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ, ಜಿಲ್ಲಾ, ತಾಲೂಕು ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ಗ್ಯಾರಂಟಿಗಳನ್ನು ಕದ್ದು, ಅದಕ್ಕೆ “ಮೋದಿ ಗ್ಯಾರಂಟಿ’ ಅಂತ ಹೆಸರಿಟ್ಟಿದ್ದಾರೆ. ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಸುಳ್ಳುಗಳನ್ನು ಹೇಳಿದ ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ. ಅವರಂತೆ ಆ ಪಕ್ಷದ (ಬಿಜೆಪಿ) ಉಳಿದ ನಾಯಕರು ಕೂಡ ಹಳ್ಳಿ-ಹಳ್ಳಿಗಳಲ್ಲಿ ನಿರ್ಲಜ್ಜದಿಂದ ಸುಳ್ಳು ಹೇಳುತ್ತಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಈ ಸುಳ್ಳುಗಳನ್ನು ಸಮರ್ಥವಾಗಿ ಎದುರಿಸಿ ಜನರಿಗೆ ಸತ್ಯ ತಿಳಿಸಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಅಚ್ಚೇ ದಿನ್‌ ಬಂತಾ? ರೈತರ ಆದಾಯ ದುಪ್ಪಟ್ಟು ಮಾಡಿದ್ರಾ? ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಬೆಲೆ ಕಡಿಮೆ ಮಾಡುತ್ತೇವೆ ಎಂದಿದ್ದರು, ಮಾಡಿದರಾ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವು ದಾಗಿ ಹೇಳಿದ್ದರು. ಅದೂ ಆಗಲಿಲ್ಲ. ಅವರು ಹೇಳಿದ್ದ ಯಾವುದನ್ನಾದರೂ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಕರ್ನಾಟಕ ರಾಜ್ಯದಿಂದ ನಾವು 4.5 ಲಕ್ಷ ಕೋಟಿ ರೂ. ತೆರಿಗೆಯನ್ನು ಕೇಂದ್ರಕ್ಕೆ ಕಟ್ಟುತ್ತೇವೆ. ಆದರೆ ಕೇಂದ್ರ ರಾಜ್ಯಕ್ಕೆ ವಾಪಸ್‌ ಕೊಡುತ್ತಿರುವುದು ಕೇವಲ 50 ಸಾವಿರ ಕೋಟಿ ರೂ. ಮಾತ್ರ. ಈ ಅನ್ಯಾಯವನ್ನೇ ನ್ಯಾಯ ಎನ್ನುತ್ತಾ ಬಿಜೆಪಿ-ಜೆಡಿಎಸ್‌ ಡ್ಯಾನ್ಸ್ ಮಾಡುತ್ತಿದೆ. ನೀವು ಇದನ್ನು ನಾಡಿನ ಜನರಿಗೆ ತಿಳಿಸಬೇಕು ಎಂದರು.

Advertisement

ನಂಬಿಕೆ ಉಳಿಸಿಕೊಳ್ಳಿಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತ ನಾಡಿ, ನಮ್ಮ ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಮಾಸಿಕ 5-6 ಸಾವಿರ ರೂ. ಉಳಿತಾಯ ವಾಗುತ್ತದೆ. ಜನರ ಕೈಯಲ್ಲಿ ಹಣ ಹರಿದಾಡುವಂತೆ ಮಾಡುವುದು ಕಾಂಗ್ರೆಸ್‌ ಸಿದ್ಧಾಂತ. ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇ ರೀತಿ ಮನುಷ್ಯನಿಗೆ ನಂಬಿಕೆ ಮುಖ್ಯ. ಕಾಂಗ್ರೆಸ್‌ ನಿಮ್ಮನ್ನು ನಂಬಿದ್ದು, ಅದನ್ನು ಉಳಿಸಿ ಕೊಳ್ಳಬೇಕು ಎಂದರು.

ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದ ಸಮಿತಿ ಮಾಡಿ ಅವರಿಗೆ ಕಚೇರಿ ಹಾಗೂ ಗೌರವಧನ ನೀಡಲಾಗುವುದು. ಇದರ ಜತೆಗೆ ವಿವಿಧ ಸಮಿತಿಗಳಲ್ಲಿ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುತ್ತಿದೆ. ನಾವು ನುಡಿದಂತೆ ನಡೆದು ನಿಮಗೆ ಶಕ್ತಿ ನೀಡಿದ್ದೇವೆ. ಈಗ ನೀವು ಪಂಚಾಯತ್‌ ಮಟ್ಟದಲ್ಲಿ ತಂಡಗಳನ್ನು ರಚಿಸಿ ಮನೆ ಮನೆಗೆ ಹೋಗಿ ಜನರಿಗೆ ಈ ಯೋಜನೆ ತಲುಪಿಸಬೇಕು. ಆ ಮೂಲಕ ನಮಗೆ ನೀವು ಶಕ್ತಿ ನೀಡಬೇಕು ಎಂದು ಹೇಳಿದರು.

ಅನುಷ್ಠಾನ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಎಂ. ರೇವಣ್ಣ, ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್‌, ಸೂರಜ್‌ ಹೆಗ್ಡೆ, ಮೆಹರೋಜ್‌ ಖಾನ್‌ ಮುಂತಾದವರು ಉಪಸ್ಥಿತರಿದ್ದರು.

ನಿಮಗೆ ಕೊಟ್ಟರೆ ವೈನ್‌ಶಾಪ್‌ಗೆ ಹೋಗಿಬಿಡುತ್ತೀರಿ!
ಬೆಂಗಳೂರು: ನಿಮ್ಮ ಕೈಯಲ್ಲಿ ಹಣ ಕೊಟ್ಟರೆ ನೀವು ವೈನ್‌ಶಾಪ್‌ಗೆ ಹೋಗಿಬಿಡುತ್ತೀರಿ. ನಿಮ್ಮ ಮೇಲೆ ನಮಗೆ ನಂಬಿಕೆ ಇಲ್ಲ. ಹೆಣ್ಣು ಕುಟುಂಬದ ಕಣ್ಣು. ಹಾಗಾಗಿ ಅವರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ!
– ಇದು ಸರಕಾರದ ಗ್ಯಾರಂಟಿಗಳು ಕೇವಲ ಮಹಿಳೆಯರಿಗೆ ಮೀಸಲಾಗಿವೆ. ಪುರುಷರಿಗೆ ಏನೂ ಕೊಟ್ಟಿಲ್ಲ ಎಂಬ ಅಪಸ್ವರಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೀಡಿದ ಸ್ಪಷ್ಟನೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಪದಾಧಿಕಾರಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಹಣ ಕೊಟ್ಟರೆ, ಮಕ್ಕಳ ಶಾಲೆಯ ಶುಲ್ಕ ಕಟ್ಟಲು ಉಪಯೋಗ ಆಗುತ್ತದೆ. ಆಸ್ಪತ್ರೆ ಮತ್ತಿತರ ಖರ್ಚು-ವೆಚ್ಚಗಳಿಗೆ ವಿನಿಯೋಗಿಸುತ್ತಾರೆ. ಹೀಗೆ ಕುಟುಂಬ ನಿರ್ವಹಣೆಗೆ ನೆರವಾಗುತ್ತದೆ. ಇದನ್ನೆಲ್ಲ ದೃಷ್ಟಿಯಲ್ಲಿಟ್ಟುಕೊಂಡು ಮಹಿಳೆಯರಿಗೆ ನೀಡಲಾಗಿದೆ ಎಂದರು.
ನಾವು ಸಾಕಷ್ಟು ಯೋಚನೆ ಮಾಡಿಯೇ ಮಹಿಳೆಯರ ಖಾತೆಗೆ ಹಣ ಬರುವಂತೆ ಮಾಡಿದ್ದೇವೆ. ಇದರ ಅನುಕೂಲಗಳ ಬಗ್ಗೆಯೂ ಸಮೀಕ್ಷೆ ನಡೆಸಲಾಗುತ್ತಿದೆ ಎಂದೂ ಡಿಕೆಶಿ ಹೇಳಿದರು.

ಸಿಎಂ ಬದಲಾವಣೆ ಸ್ಥಿತಿ ಬರದು: ಎಚ್‌.ಎಂ.ರೇವಣ್ಣ
ಬೆಂಗಳೂರು: ಯಾವ ದೃಷ್ಟಿಯಿಂದಲೂ ಮುಖ್ಯಮಂತ್ರಿ ಬದಲಾವಣೆ ಮಾಡುವ ಸ್ಥಿತಿ ಅಥವಾ ಸಂದರ್ಭ ಬರುವುದಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಎಂ.ರೇವಣ್ಣ ಸ್ಪಷ್ಟಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆ ಬಳಿಕ ಅಧಿಕಾರ ಬದಲಾವಣೆ ಆಗಲಿದೆ ಎಂಬುದೆಲ್ಲ ಸುಳ್ಳು ಎಂದರು. ಪ್ರಧಾನಿ ನರೇಂದ್ರ ಮೋದಿ ಅವರದ್ದು ಟೊಳ್ಳು ಗ್ಯಾರಂಟಿ. ಅವರ ಗ್ಯಾರಂಟಿಯಲ್ಲಿ ಯಾವುದೇ ವಿವರಗಳಿಲ್ಲ. ನಮ್ಮ ಗ್ಯಾರಂಟಿಯೇ ಅಧಿಕೃತ ಹಾಗೂ ನಿಜವಾದ ಗ್ಯಾರಂಟಿ. ಬಿಜೆಪಿಯವರದ್ದು ಬರೀ ಪ್ರಚಾರ. ನಮ್ಮದು ಹಾಗಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next