ಬೆಂಗಳೂರು: ಜೂನ್ 5ಕ್ಕೆ ರಾಜ್ಯ ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರ ಸಭೆ ಕರೆಯಲಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಈ ಕುರಿತು ಮಾಹಿತಿ ನೀಡಿದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾಧ್ಯಕ್ಷರ ಸಭೆಯನ್ನು ಜೂ. 5ರಂದು ಕರೆಯಲಾಗಿದ್ದು, ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯದ ಎಲ್ಲ ಸಂಸದರಿಗೂ ಬೃಹತ್ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಸೇರಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಐತಿಹಾಸಿಕ ವಿಜಯವನ್ನು ಸಂಭ್ರಮಿಸಿ ಅಭಿನಂದಿಸುವ ಸಂದರ್ಭಕ್ಕೆ ಸಾಕ್ಷಿಯಾಗು ವಂತೆ ಕೋರಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ 25 ಲೋಕಸಭಾ ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡು ವಾಗ, ಬಿಜೆಪಿ ಹಿಂದಿ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕದಲ್ಲೂ ದೊಡ್ಡ ಗೆಲುವು ಸಾಧಿಸಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿನ ಭ್ರಷ್ಟ ಸರ್ಕಾರ ಅತೃಪ್ತ ಶಾಸಕರನ್ನು ಉಳಿಸಿಕೊಂಡು ಸಚಿವ ಸ್ಥಾನ ನೀಡಿ ಅಧಿಕಾರದಲ್ಲಿರುವ ಷಡ್ಯಂತ್ರ, ಪಿತೂರಿ ನಡೆಸುತ್ತಿದೆ. ನೂರಾರು ತಾಲೂಕುಗಳಲ್ಲಿ ಭೀಕರ ಬರವಿದ್ದು, ಸರ್ಕಾರ, ಅಧಿಕಾರಿಗಳು ಸ್ಪಂದಿಸದಿರುವುದು ಖಂಡನೀಯ. ಇದರ ವಿರುದ್ಧ ಹೋರಾಟದ ರೂಪುರೇಷೆಯನ್ನು ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿದರು.
ಪ್ರಕರಣ ಹಿಂಪಡೆಯಲು ಆಗ್ರಹ
ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಮೈಸೂರಿನಲ್ಲಿ ಗಲಾಟೆ ಮಾಡಿದ್ದಾರೆ ಎಂಬುದಾಗಿ ವರದಿ ಪ್ರಕಟಿಸಿದ್ದ ‘ವಿಶ್ವವಾಣಿ’ ಸಂಪಾದಕ ವಿಶ್ವೇಶ್ವರ ಭಟ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ಹೂಡಿ ಎಫ್ಐಆರ್ ದಾಖಲಿಸಿರುವುದನ್ನು ಬಿ.ಎಸ್.ಯಡಿಯೂರಪ್ಪ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಎಲ್ಲರ ವಿರುದ್ಧ ತಿರುಗಿ ಬಿದ್ದಿದ್ದಾಯಿತು, ಇದೀಗ ‘ವಿಶ್ವವಾಣಿ’ ಸಂಪಾದಕ ವಿಶ್ವೇಶ್ವರ ಭಟ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದಿರುವುದನ್ನು ಖಂಡಿಸುತ್ತೇನೆ. ಕೂಡಲೇ ಅವರ ವಿರುದ್ಧ ದಾಖಲಿಸಿರುವ ಎಫ್ಐಆರ್, ಕ್ರಿಮಿನಲ್ ಮೊಕದ್ದಮೆ ಹಿಂಪಡೆಯಬೇಕು. ಮಾಧ್ಯಮದವರ ಸ್ವಾತಂತ್ರ್ಯದ ಹಕ್ಕಿಗೆ ಚ್ಯುತಿ ಉಂಟಾಗಿದೆ. ಕೂಡಲೇ ಪ್ರಕರಣ ಹಿಂಪಡೆಯದಿದ್ದರೆ ದೇಶಾದ್ಯಂತ ಮಾಧ್ಯಮ ಸ್ನೇಹಿತರು ತಿರುಗಿ ಬೀಳಲಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವುದಾಗಿ ನಾನು ಹೇಳಿಲ್ಲ. ರಾಜ್ಯ ರಾಜಕೀಯ ಬೆಳವಣಿಗೆಯನ್ನು ಗಮನಿಸಿ ಕಾದು ನೋಡಲಾಗುವುದು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 177 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಒಂದೊಮ್ಮೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗುವುದಾದರೆ ಸ್ವಾಗತ. ಬಿಜೆಪಿಯ ಯಾವ ಶಾಸಕರು ಕಾಂಗ್ರೆಸ್, ಜೆಡಿಎಸ್‌ಗೆ ಹೋಗಲು ಸಾಧ್ಯವಿಲ್ಲ. ಸರ್ಕಾರವನ್ನು ಉಳಿಸಿಕೊಳ್ಳಲು ಕೆಲವರು ಈ ರೀತಿಯ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ