ನವದೆಹಲಿ: ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಳವಾಗುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಲು, ಮೊಸರು ಮತ್ತು ಅಕ್ಕಿ ಮೇಲೆ ಜಿಎಸ್ ಟಿ ವಿಧಿಸುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿ ಮಾಡಲು ಮುಂದಾಗಿದೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಅನ್ನದಾತರಿಗೆ ಕಂಟಕವಾಗಿರುವ ನಕಲಿ ಗೊಬ್ಬರ ಔಷಧಿ ದಂಧೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ
“ಜನ ಸಾಮಾನ್ಯರ ದಿನಬಳಕೆಯ ವಸ್ತುಗಳ ಮೇಲೆ ಜಿಎಸ್ ಟಿ ಜಾರಿಗೊಳಿಸುವ ನಿರ್ಧಾರದಿಂದ ಮಧ್ಯಮ ವರ್ಗದ ಜನರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೇರಿದಂತಾಗಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿರುವ ಯುವಕರ ಸ್ಥಿತಿಯನ್ನು ಗಮನಿಸಬೇಕು. ಜನಸಾಮಾನ್ಯರಿಗೆ ಇದರಿಂದ ಮತ್ತಷ್ಟು ತೊಂದರೆ ಎದುರಾಗಲಿದೆ ಎಂದು ವರುಣ್ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದರು.
ಮೊಸರು, ಹಾಲು, ಮಜ್ಜಿಗೆ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಜಿಎಸ್ ಟಿ ಜಾರಿಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಆಹಾರ ಧಾನ್ಯಗಳಿಗೆ ವಿಧಿಸಲಾದ ಶೇ.5 ಜಿಎಸ್ ಟಿಯು 25 ಕೆಜಿ ಹಾಗೂ ಅದಕ್ಕಿಂತ ಹೆಚ್ಚಿನ ತೂಕದ ಚೀಲಗಳಿಗೆ ಅನ್ವಯಿಸುವುದಿಲ್ಲ. 25 ಕೆಜಿಗಿಂತ ಕಡಿಮೆ ತೂಕದ ಲೇಬಲ್ ಅಂಟಿಸಿರುವ ಅಕ್ಕಿ ಗೋಧಿ, ಧಾನ್ಯ, ಬೇಳೆಕಾಳು, ಹಿಟ್ಟಿನ ಪ್ಯಾಕೇಟ್ ಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ತಿಳಿಸಿತ್ತು.
ಈಗಾಗಲೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆಯಾಗಿದ್ದು, ಇದರೊಂದಿಗೆ ಮೊಸರು, ಅಕ್ಕಿ, ಬೇಳೆ ಕಾಳು ಬೆಲೆ ಕೂಡಾ ಏರಿಕೆಯಾಗಲಿದೆ. ಇನ್ನು ಮುಂಬರುವ ದಿನಗಳಲ್ಲಿ ವಿದ್ಯುತ್ ದರ ಕೂಡಾ ಏರಿಕೆಯಾಗಲಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್ ನಲ್ಲಿ ದೂರಿದ್ದಾರೆ.