ಮಂಗಳೂರು: ಲೋಕಸಭಾ ಚುನಾವಣೆಗೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮೀನುಗಾರ ಸಮಾಜದ ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂದು ಮೀನುಗಾರ ಸಂಘಟನೆಯ ಪ್ರಮುಖರು ಆಗ್ರಹಿಸಿದ್ದಾರೆ.
ಮೀನುಗಾರ ಮುಖಂಡ ಕಿಶೋರ್ ಡಿ. ಸುವರ್ಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2019ರಲ್ಲಿ ಬಿಜೆಪಿ ಯಾವುದೇ ಒಬಿಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ. ರಾಜ್ಯದ ಜನಸಂಖ್ಯೆಯು ಶೇ. 50ರಷ್ಟಿರುವ ಒಬಿಸಿ ಅಭ್ಯರ್ಥಿಗಳಿಗೆ ಸೀಟು ನೀಡಿಲ್ಲ ಎಂದರು.
ರಾಜಕೀಯ ವೇದಿಕೆಗಳಲ್ಲಿ ಮೀನುಗಾರರ ಸದುದ್ದೇಶವನ್ನು ಸಮರ್ಥಿಸುವ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮೀನುಗಾರರ ಸಮಸ್ಯೆಗಳ ನಿವಾರಣೆ ಮತ್ತು ಮೀನುಗಾರಿಕೆಯ ಸರ್ವಾಂ ಗೀಣ ಅಭಿವೃದ್ಧಿಗೆ ಮೀನುಗಾರರ ಪ್ರತಿನಿಧಿಯನ್ನು ಹೊಂದುವುದು ಬಹಳ ಮುಖ್ಯವಾಗಿದೆ.
ಪ್ರಮೋದ್ ಮಧ್ವರಾಜ್ ರಾಜಕೀಯ ಹಿನ್ನೆಲೆ ಯಿಂದ ಬಂದಿರುವ ಗಮನಾರ್ಹ ವ್ಯಕ್ತಿಯಾಗಿದ್ದು, 12 ವರ್ಷಗಳಿಂದ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ 13 ವರ್ಷಗಳಿಂದ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾಗಿ, 6 ವರ್ಷಗಳಿಂದ ರಾಷ್ಟ್ರೀಯ ಮೀನುಗಾರರ ವೇದಿಕೆಯ ಕಾರ್ಯದರ್ಶಿಯಾಗಿ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್ ನೀಡಬೇಕೆಂಬುದು ನಮ್ಮ ಆಗ್ರಹ ಎಂದರು.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮೀನುಗಾರರಿಗೆ ಸದುಪ ಯೋಗವಾಗುವಂತೆ ಮಾಡುವುದು, ರಾಜ್ಯದ 14 ಗ್ರಾಹಕ ಮೀನುಗಾರರ ಡೀಸೆಲ್ ಮಾರಾಟ ಸೊಸೈಟಿಗಳ ಸಮಸ್ಯೆ ಬಗೆಹರಿಸುವುದು, ಅಂತಾರಾಜ್ಯ ಮೀನುಗಾರರ ಸಮಸ್ಯೆ ಪರಿಹರಿಸಲು ಏಕರೂಪ ಕಾನೂನು ಜಾರಿಗೊಳಿಸುವುದು ಸಹಿತ ವಿವಿಧ ವಿಷಯವನ್ನು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಲು ಪ್ರಮೋದ್ ಮಧ್ವರಾಜ್ ಅವರು ಸಮರ್ಥರಾಗಿದ್ದು, ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕೆಂದು ನಮ್ಮ ಒತ್ತಾಯವಾಗಿದೆ ಎಂದವರು ಆಗ್ರಹಿಸಿದ್ದಾರೆ.
ಮುಖಂಡರಾದ ಮೋಹನ್ ಬೆಂಗ್ರೆ, ಅನಿಲ್ ಕುಮಾರ್ ಚೊಕ್ಕಬೆಟ್ಟು, ಉಮೇಶ್ ಜಿ. ಕರ್ಕೇರ, ಭರತ್ ಕುಮಾರ್ ಉಳ್ಳಾಲ, ಸದಾನಂದ ಬಂಗೇರ, ಪುಂಡಲೀಕ ಹೊಸಬೆಟ್ಟು, ರಾಜೇಶ್ ಪುತ್ರನ್ ಪತ್ರಿಕಾಗೋಷ್ಠಿಯಲ್ಲಿದ್ದರು.