ಹೊಸದಿಲ್ಲಿ : ಸದಾ ಉರಿ ನಾಲಿಗೆ ಮೂಲಕ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುವ ಪ್ರಖರ ಹಿಂದುತ್ವ ಪ್ರತಿಪಾದಕ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ಗೆ ಈ ಬಾರಿ ಉನ್ನಾವ್ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.
ಬಿಎಸ್‌ಪಿ-ಎಸ್‌ಪಿ ಮೈತ್ರಿಯ ಹಿನ್ನಲೆಯಲ್ಲಿ ಹೊಸ ಅಭ್ಯರ್ಥಿಯ ಹುಡುಕಾಟದಲ್ಲಿ ಬಿಜೆಪಿ ಇದ್ದು, ಈ ವಿಚಾರ ಸಾಕ್ಷಿ ಮಹಾರಾಜ್ ಅವರನ್ನು ಕೆರಳಿಸಿದ್ದು ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ಅವರಿಗೆ ಪತ್ರ ಬರೆದಿರುವ ಸಾಕ್ಷಿ ಮಹಾರಾಜ್, ನನಗೆ ಟಿಕೆಟ್ ನೀಡದೆ ಹೋದಲ್ಲಿ ಪರಿಣಾಮಗಳು ಧನಾತ್ಮಕವಾಗಿರದೇ ಇರಬಹದು. ನಾನು ಉನ್ನಾವ್‌ನಲ್ಲಿ ಮೂರು ಲಕ್ಷದ ಹದಿನೈದು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ನನ್ನೆದುರು ಕಾಂಗ್ರೆಸ್ ಮತ್ತು ಬಿಎಸ್‌ಪಿ ಅಭ್ಯಥಿರಗಳು ಠೇವಣಿ ಕಳೆದುಕೊಂಡಿದ್ದರು. ಎಸ್‌ಪಿ ಎರಡನೇ ಸ್ಥಾನ ಪಡೆದಿತ್ತು.ಈಗ ಮೈತ್ರಿ ಧರ್ಮದ ಅನ್ವಯ ಎಸ್‌ಪಿ ಅಭ್ಯರ್ಥಿಯನ್ನು ಹಾಕಲಾಗಿದೆ. ಎಲ್ಲಿಯಾದರೂ ನನ್ನನ್ನು ಹೊರತು ಪಡಿಸಿ ಬೇರೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಉನ್ನಾವ್ ಕ್ಷೇತ್ರದ ಮತ್ತು ದೇಶದ್ಯಂತ ಇರುವ ಲಕ್ಷಾಂತರ ಮಂದಿಗೆ ನೋವಾಗುತ್ತದೆ ಎಂದು ಬರೆದಿದ್ದಾರೆ.
ಈ ಬಾರಿ ನನಗೆ ಟಿಕೆಟ್ ನೀಡಿ, ನಾನು ವಿರೋಧಿ ಅಭ್ಯರ್ಥಿಯನ್ನು ನಾಲ್ಕರಿಂದ ಐದು ಲಕ್ಷ ಮತಗಳ ಅಂದರದಿಂದ ಸೋಲಿಸುತ್ತೇನೆ ಮಾತ್ರವಲ್ಲದೆ ಅವರು ಠೇವಣಿಯನ್ನು ಕಳೆದುಕೊಳ್ಳುವಂತೆ ಮಾಡುತ್ತೇನೆ. ನನಗೆ ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಇಲ್ಲ. ನನ್ನ ಮನವಿಯನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ ಎಂದು ಮನವಿ ಮಾಡಿದ್ದಾರೆ.