ಕೋಲ್ಕತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ (ಮಾರ್ಚ್ 02) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸಮಯ ನಿಗದಿಪಡಿಸಿರುವ ಬಗ್ಗೆ ಭಾರತೀಯ ಜನತಾ ಪಕ್ಷದ ಸಂಸದ ದಿಲೀಪ್ ಘೋಷ್ ಕಟುವಾಗಿ ಟೀಕಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:Tragedy: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಯಾತ್ರಿಕನಿಗೆ ಶೌಚಾಲಯದಲ್ಲೇ ಹೃದಯಾಘಾತ
“ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸದಾ ವಾಗ್ದಾಳಿ ನಡೆಸುವ ಮಮತಾ ಬ್ಯಾನರ್ಜಿ, ಕಳೆದ ಬಾರಿ ಪ್ರಧಾನಿ ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸದೇ ಕಾರ್ಯಕ್ರಮಕ್ಕೂ ಗೈರುಹಾಜರಾಗಿದ್ದರು. ಆದರೆ ಇದೀಗ ದಿಢೀರ್ ಭೇಟಿ ಮಾತುಕತೆಯ ಹಿಂದಿನ ಉದ್ದೇಶವೇನು” ಎಂದು ಘೋಷ್ ಪ್ರಶ್ನಿಸಿದ್ದಾರೆ.
ಮಮತಾ ಬ್ಯಾನರ್ಜಿ ಪಕ್ಷ ಈಗ ಹಲವು ವಿಪತ್ತಿಗೆ ಸಿಲುಕಿಕೊಂಡಿದೆ. ಇಂಡಿಯಾ ಬ್ಲಾಕ್ ಜತೆ ಕೈಜೋಡಿಸುವಲ್ಲಿಯೂ ಮಮತಾ ವಿಫಲರಾಗಿದ್ದಾರೆ. ಆದರೆ ಇದೀಗ ಜಾರಿ ನಿರ್ದೇಶನಾಲಯದ ಕೆಂಗಣ್ಣಿಗೆ ಗುರಿಯಾಗಿರುವ ಪಕ್ಷದ ಮುಖಮಡ ಶಹಜಹಾನ್ ಶೇಕ್ ನ ರಕ್ಷಣೆಗಾಗಿ ಪ್ರಧಾನಿ ಮೋದಿ ಅವರ ಸಲಹೆ ಕೇಳಲು ಮುಂದಾಗಿರಬೇಕು ಎಂದು ಘೋಷ್ ವ್ಯಂಗ್ಯವಾಡಿರುವುದಾಗಿ ವರದಿ ವಿವರಿಸಿದೆ.
ಪ್ರಸ್ತುತ ಮಮತಾ ಬ್ಯಾನರ್ಜಿ ಭಾರೀ ತೊಂದರೆಯಲ್ಲಿ ಸಿಲುಕಿಕೊಂಡಿದ್ದು, ಆ ಕಾರಣದಿಂದಲೇ ಎಲ್ಲೆಡೆ ಓಡಾಡುತ್ತಿದ್ದಾರೆ. ಪಕ್ಷ ಮತ್ತು ಪಕ್ಷದ ಮುಖಂಡರನ್ನು ರಕ್ಷಿಸಲು ಬ್ಯಾನರ್ಜಿ ಹರಸಾಹಸ ಪಡುತ್ತಿದ್ದಾರೆ ಎಂದು ಘೋಷ್ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಮೂರು ರಾಜ್ಯಗಳಿಗೆ ಭೇಟಿ ನೀಡಿದ್ದರು. ಶುಕ್ರವಾರ (ಮಾ.01) ಮೋದಿ ಪಶ್ಚಿಮಬಂಗಾಳದ ಅರಾಮ್ ಬಾಗ್ ಗೆ ಭೇಟಿ ನೀಡಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಿ ಹೂಗ್ಲಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.