ನವದೆಹಲಿ: ಉತ್ತರ ದೆಹಲಿಯ ಮುನ್ಸಿಪಲ್ ಕಾರ್ಪೋರೇಶನ್ ಬುಧವಾರ (ಏ.20) ಜಹಾಂಗಿರ್ ಪುರಿ ಪ್ರದೇಶದಲ್ಲಿನ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭಿಸಿದ ಬಳಿಕ ಬಿಜೆಪಿ ಸಂಸದ ನರಸಿಂಹ ರಾವ್, ಜೆಸಿಬಿ ಅಂದರೆ ಜಿಹಾದ್ ಕಂಟ್ರೋಲ್ ಬೋರ್ಡ್ ಎಂಬುದಾಗಿ ಟ್ವೀಟ್ ಮಾಡುವ ಮೂಲಕ ವಿವಾದಕ್ಕೊಳಗಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸರಕಾರದ ಶೇ.40 ಕಮಿಷನ್ ಲಂಚ ಹಾಗೂ ಮಂಚದ ಬಗ್ಗೆ ಪ್ರಧಾನಿ ಮಾತನಾಡಲಿ: ಮಾಜಿ ಸಂಸದ ಶಿವರಾಮಗೌಡ
ಜೆಸಿಬಿ ಬಳಸಿ ಕಟ್ಟಡಗಳನ್ನು ತೆರವುಗೊಳಿಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿರುವ ರಾವ್, JCB ಅಂದರೆ ಜಿಹಾದ್ ಕಂಟ್ರೋಲ್ ಬೋರ್ಡ್, ಹ್ಯಾಶ್ ಬುಲ್ಡೋಜರ್ ಬಾಬಾ ಎಂದು ಉಲ್ಲೇಖಿಸಿದ್ದಾರೆ.
ದೆಹಲಿಯ ಜಹಾಂಗಿರ್ ಪುರಿ ಪ್ರದೇಶದಲ್ಲಿ ಬುಧವಾರ(ಏ.20) ಹಲವಾರು ಜೆಸಿಬಿ ಕಾರ್ಯಾಚರಣೆ ಮೂಲಕ ಅಕ್ರಮ ಕಟ್ಟಡ ತೆರವುಗೊಳಿಸಿದ್ದು, ಕಾರ್ಯಾಚರಣೆಗೆ ಸುಪ್ರೀಂಕೋರ್ಟ್ ತಡೆ ನೀಡುವ ಮೊದಲು ಹಲವಾರು ಅಂಗಡಿ, ಮನೆಗಳನ್ನು ತೆರವುಗೊಳಿಸಲಾಗಿತ್ತು.
ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಮಾಡುವುದಾಗಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಜಹಾಂಗಿರ್ ಪುರಿ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಜಹಾಂಗಿರ್ ಪುರಿಯಲ್ಲಿ ಕೋಮು ಹಿಂಸಾಚಾರ ನಡೆಸಿದವರು ಅಕ್ರಮ ಕಟ್ಟಡಗಳಲ್ಲಿ ವಾಸವಾಗಿದ್ದು, ಅವುಗಳನ್ನು ಧ್ವಂಸಗೊಳಿಸಬೇಕೆಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಆರೋಪಿಸಿದ್ದರು ಎಂದು ವರದಿ ತಿಳಿಸಿದೆ.