ಹೊಸದಿಲ್ಲಿ : ಮೂರು ಜನ ಪುರುಷರಿರುವ ಆಟೋ ರಿಕ್ಷಾ ಹತ್ತದೆ ಹೋಗಿದ್ದರೆ ರೇಪ್ ಆಗುತ್ತಿರಲಿಲ್ಲ ಅಲ್ಲವೇ ಎಂದು ಗ್ಯಾಂಗ್ ರೇಪ್ ಸಂತ್ರಸ್ತೆಗೆ ಜೀವನ ಪಾಠ ಮಾಡುವ ಮೂಲಕ ಬಿಜೆಪಿ ಸಂಸದೆ, ನಟಿ ಕಿರಣ್ ಖೇರ್ ವಿವಾದಕ್ಕೆ ಸಿಲುಕಿದ್ದಾರೆ.
ನವೆಂಬರ್ 17 ರಂದು ಚಂದೀಘಡದಲ್ಲಿ ಆಟೋ ರಿಕ್ಷಾವೊಂದರಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಈ ವಿಚಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಖೇರ್ ‘ನೀನು (ರೇಪ್ ಸಂತ್ರಸ್ತೆ) 3 ಜನ ಪುರುಷರಿದ್ದ ಆಟೋವನ್ನು ಹತ್ತದೆ ಹೋಗಿದ್ದರೆ ಅತ್ಯಾಚಾರ ಆಗುತ್ತಿರಲಿಲ್ಲ ಅಲ್ಲವೇ’ ಎಂದು ವಿವಾದಕ್ಕೆ ಸಿಲುಕಿದ್ದಾರೆ.
‘ನಾವು ಮುಂಬಯಿಯಲ್ಲಿ ಟ್ಯಾಕ್ಸಿ ಹಿಡಿಯುವ ಮುನ್ನ ನಂಬರ್ ಪ್ಲೇಟ್ ಬಗ್ಗೆ ಗಮನಹರಿಸುತ್ತೇವೆ. ಈಗೀನ ಕಾಲದಲ್ಲಿ ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯ’ ಎಂದಿದ್ದಾರೆ.
ಹೇಳಿಕೆಯ ವಿರುದ್ಧ ಮಹಿಳಾ ಪರ ಸಂಘಟನೆಗಳು ಸೇರಿದಂತೆ ಹಲವರಿಂದ ಸಾಮಾಜಿಕ ತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು ,ಇದಕ್ಕೆ ಖೇರ್ ಸ್ಪಷ್ಟನೆ ನೀಡಿದ್ದಾರೆ.
‘ನಾನು ಹುಡುಗಿಯರು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದೆ. ನನ್ನ ಹೇಳಿಕೆಯ ಮೇಲೆ ರಾಜಕೀಯ ಮಾಡುವವರಿಗೆ ನಾಚಿಗೆಯಾಗಬೇಕು. ಅವರಿಗೂ ತಮ್ಮ ಮನೆಗಳಲ್ಲಿ ಹುಡುಗಿಯರು ಇದ್ದರೆ ನನ್ನಂತೆ ರಚನಾತ್ಮಕವಾಗಿ ಮಾತನಾಡಬೇಕೆ ಹೊರತು ಹಾನಿಕಾರಕವಾಗಿ ಮಾತನಾಡಬಾರದು’ ಎಂದು ತಿರುಗೇಟು ನೀಡಿದ್ದಾರೆ.
ಚಂದೀಘಡದ ಸೆಕ್ಟರ್ 53 ರಲ್ಲಿ ಗ್ಯಾಂಗ್‌ರೇಪ್ ನಡೆದಿತ್ತು. ಆರೋಪಿಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.