ಶಿರಸಿ: ಕಳೆದ ಒಂದು ವಾರದಿಂದ ತೀವ್ರ ಕುತೂಹಲದ ಕೇಂದ್ರವಾಗಿರುವ ಅನಂತಕುಮಾರ ಹೆಗಡೆ ಅವರ ಮನೆ ಶಿವೋಹಂದಲ್ಲಿ ಗುರುವಾರವೂ ಹೆಗಡೆ ಅವರ ಅಭಿಮಾನಿಗಳು, ಕಾರ್ಯಕರ್ತರು ಮತ್ತೆ ಚುನಾವಣೆಗೆ ಸ್ಪರ್ಧಿಸುವಂತೆ ಆಗ್ರಹಿಸಿದರು.
ಹಿಂದೂ ಫೈರ್ ಬ್ರಾಂಡ್ ಸಂಸದ ಅನಂತಕುಮಾರ ಹೆಗಡೆ ಅವರ ನಿವಾಸಕ್ಕೆ ಖಾನಾಪುರದ ಶ್ರೀರಾಮ ಸೇನಾ ಪ್ರಮುಖರು, ಬಿಜೆಪಿ ಕಾರ್ಯಕರ್ತರು ಭೇಟಿ ನೀಡಿ, ಈ ಬಾರಿ ಸ್ಪರ್ಧಿಸಬೇಕೆಂದು ಆಗ್ರಹಿಸಿದರು. ಆದರೆ ಅನಂತಕುಮಾರ ಹೆಗಡೆ ಅವರು ಎಂದಿನಂತೆ ವಾರದೊಳಗೆ ಸಂಘಟನೆಯ ಪ್ರಮುಖರ ಜೊತೆ ಚರ್ಚೆ ನಡೆಸಿ ನಿರ್ಣಯ ಹೇಳುವದಾಗಿ ಹೇಳಿದರು. ಆಗಮಿಸಿದ ಅಭಿಮಾನಿಗಳಿಗೆ ಚಹಾ, ಮಜ್ಜಿಗೆ, ಸ್ವೀಟ್ ನೀಡಿ ಬೀಳ್ಕೊಟ್ಟರು. ಕಾರ್ಯಕರ್ತರು ಸೆಲ್ಪಿಗೆ ಮುಗಿ ಬಿದ್ದರು.
ಕಳೆದ 4 ವರ್ಷದಿಂದ ಸಕ್ರಿಯ ರಾಜಕಾರಣ ಮತ್ತು ಪಕ್ಷ ರಾಜಕಾರಣದಿಂದ ದೂರ ಉಳಿದಿದ್ದ ಅನಂತಕುಮಾರ ಹೆಗಡೆ ಮನೆಗೆ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರು ಭೇಟಿ ನೀಡಿ, ಈ ಬಾರಿ ಖಂಡಿತ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಈವರೆಗೂ 11 ತಾಲೂಕಿನ ಕಾರ್ಯಕರ್ತರ ಮಾತನ್ನು ಆಲಿಸಿ, ಬಿಜೆಪಿಗೆ ಅದರದ್ದೆ ಆದ ಸಿದ್ದಾಂತವಿದೆ. ಉಳಿದ ಪಕ್ಷಗಿಂತ ಬಿಜೆಪಿ ಭಿನ್ನವಾಗಿದೆ. ಸಂಘಟನೆ ಹಾಗೂ ಪಕ್ಷದ ವರಿಷ್ಠರ ಜತೆ ಚರ್ಚಿಸುತ್ತೇನೆ ಎಂದು ಅಷ್ಟೇ ಹೇಳಿದ್ದಾರೆ ಹೊರತು ಇನ್ನೊಬ್ಬರಿಗೆ ಅವಕಾಶ ನೀಡಿ ಮತ್ತು ನಾನೇ ಈ ಬಾರಿಯ ಅಭ್ಯರ್ಥಿ ಎಂದು ಮಾತ್ರ ಹೇಳಿಲ್ಲ. ಅದನ್ನೇ ಗುರುವಾರವೂ ಹೇಳಿದರು.
ಖಾನಾಪುರ ಭಾಗದ ನೂರಾರು ಸಂಖ್ಯೆಯ ಕಾರ್ಯಕರ್ತರು ಹಾಗೂ ಅನಂತಕುಮಾರ ಹೆಗಡೆ ಅಭಿಮಾನಿಗಳು ಅವರ ಶಿವೋಹಂ ನಿವಾಸಕ್ಕೆ ಭೇಟಿ ನೀಡಿ, ಹಿಂದುತ್ವದ ರಕ್ಷಣೆಗಾಗಿ ಅನಂತಕುಮಾರ ಹೆಗಡೆ ಮತ್ತೊಮ್ಮೆ ಸ್ಪರ್ಧಿಸಬೇಕು. ಇಲ್ಲವಾದಲ್ಲಿ ನಾವೆಲ್ಲರೂ ಅನಾಥರಾಗುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಲು ಅನಂತಕುಮಾರ ಹೆಗಡೆ ಮತ್ತೊಮ್ಮೆ ಸ್ಪರ್ಧಿಸಬೇಕು ಎಂದು ಸಂಸದರನ್ನು ಆಗ್ರಹಿಸಿದರು.
ಖಾನಾಪುರದ ಹಿಂದೂ ಪ್ರಮುಖ ಪಂಡಿತ ಓಗೊಲೆ ಮಾತನಾಡಿ, ಕೆನರಾ ಕ್ಷೇತ್ರದಲ್ಲಿ ಹಿಂದುತ್ವ ಉಳಿಯಲು ನೀವು ನಿಲ್ಲಬೇಕು. ಇಲ್ಲದೇ ಹೋದರೆ ಸಾವಿರಾರು ಹಿಂದೂ ಕಾರ್ಯಕರ್ತರು ಮನೆ ಎದುರು ಧರಣಿ ನಡೆಸುತ್ತಾರೆ ಎಂದರು. ಈ ವೇಳೆ ಪ್ರಮುಖ ಪ್ರಮುಖ ಕೃಷ್ಣ ಎಸಳೆ, ಚಂದ್ರು ದೇವಾಡಿಗ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ನಾಲ್ಕು ವರ್ಷದಿಂದ ಸಂಸದರು ಕಾಣಲಿಲ್ಲ ಎಂಬ ಬೇಸರವಿತ್ತು. ಅವರನ್ನು ನೋಡಿದಾಗ ಅದೆಲ್ಲ ಮಾಯವಾದುದ್ದೇ ಅಚ್ಚರಿ. ಅವರ ಜತೆ ಸೆಲ್ಪಿ ಪಡೆದು ಕೈ ಕುಲಕಿದೆ ಎಂದು ಬಿಜೆಪಿ ಕಾರ್ಯಕರ್ತ ಗಣೇಶ ಸಂಭ್ರಮ ಹಂಚಿಕೊಂಡರು.