ನವದೆಹಲಿ: ದೇಶಾದ್ಯಂತ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿ ಶನಿವಾರವಷ್ಟೇ 1000 ಕಿ.ಮೀ. ಯಾತ್ರೆ ಪೂರೈಸಿದ ಹಿನ್ನೆಲೆಯಲ್ಲಿ ದೊಡ್ಡ ರ್‍ಯಾಲಿಯೇ ನಡೆದಿದೆ.
ಇಂತಹ ಹೊತ್ತಿನಲ್ಲೇ ಬಿಜೆಪಿ ಒಂದು ಅಣಕು ಕಾರ್ಟೂನ್ ವಿಡಿಯೊ ಬಿಡುಗಡೆ ಮಾಡಿದೆ. ಅದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯನ್ನು “ಅಮ್ಮ ಈ ದುಃಖಗಳೆಲ್ಲ ಯಾಕೆ ಮುಗಿಯುತ್ತಿಲ್ಲ’ ಎಂದು ಕೇಳುತ್ತಾರೆ!
ನಂತರ ಖತಮ್, ಟಾಟಾ, ಗುಡ್ ಬೈ ಎಂದು ಹೇಳುತ್ತಾರೆ. ಈ ವಿಡಿಯೊದ ಮೂಲಕ ದೇಶದ ಎಲ್ಲ ರಾಜ್ಯಗಳಲ್ಲಿ ನಾಯಕರು ಕಾಂಗ್ರೆಸ್ ತೊರೆಯುತ್ತಿರುವುದನ್ನು ತೋರಿಸಲಾಗಿದೆ. ಮೊದಲು ಗೋವಾ, ನಂತರ ಮಧ್ಯಪ್ರದೇಶ, ಜಮ್ಮುಕಾಶ್ಮೀರ, ಪ್ರಸ್ತುತ ರಾಜಸ್ಥಾನದ ಬಿಕ್ಕಟ್ಟುಗಳನ್ನು ತೋರಿಸಲಾಗಿದೆ. ಭಾರತ್ ಜೋಡೋ ಅಗತ್ಯವಿಲ್ಲ, ರಾಹುಲ್ ಮೊದಲು ಕಾಂಗ್ರೆಸ್ ಜೋಡೋ ಮಾಡಲಿ ಎಂದು ಅಣಕವಾಡಲಾಗಿದೆ.
ಇದಕ್ಕೆ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾತೆ ತಿರುಗೇಟು ನೀಡಿದ್ದಾರೆ. “ಭಾರತ್ ಜೋಡೋ ಯಾತ್ರೆಯಿಂದ ಇಡೀ ಬಿಜೆಪಿ ನಾಕಾಣೆ (25 ಪೈಸೆ) ಟ್ರೋಲ್ ಪಕ್ಷವಾಗಿ ಬದಲಾಗಿದೆ. ಆದರೆ ಈ ಭೀತಿ ಒಳ್ಳೆಯದು. ಬಿಜೆಪಿ ನಿರುದ್ಯೋಗ, ಹಣದುಬ್ಬರ ನಿಯಂತ್ರಿಸುವುದಕ್ಕೆ ಸಂಪೂರ್ಣ ಶ್ರಮ ಹಾಕಿದ್ದರೆ ಒಳ್ಳೆಯದಿತ್ತು’ ಎಂದಿದ್ದಾರೆ.