ಬೆಂಗಳೂರು: ವಿಶ್ವಾಸಮತ ಯಾಚನೆಗೆ ಸಮಯ ನಿಗದಿಪಡಿಸುವಂತೆ ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಮೇಲೆ ಒತ್ತಡ ಹೇರಲು ಬಿಜೆಪಿ ನಿರ್ಧರಿಸಿದೆ. ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ಯಲಹಂಕ ಬಳಿಯ ರಮಡಾ ಹೋಟೆಲ್‌ನಲ್ಲಿ ಭಾನುವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸೋಮವಾರ ವಿಶ್ವಾಸಮತ ಯಾಚನೆಗೆ ನಿರ್ದಿಷ್ಟ ಸಮಯ ನಿಗದಿಪಡಿಸಬೇಕು ಎಂದು ಒತ್ತಾಯಿಸಬೇಕು. ಯಾವುದೇ ಕಾರಣಕ್ಕೂ ಪ್ರಚೋದನೆಗೆ ಒಳಗಾಗಬಾರದು. ಯಾವುದೇ ಪ್ರತಿಕ್ರಿಯೆ ನೀಡದೆ ತಾಳ್ಮೆಯಿಂದ ವರ್ತಿಸಬೇಕು ಎಂಬುದಾಗಿ ಸೂಚಿಸಿದರು ಎಂದು ಮೂಲಗಳು ಹೇಳಿವೆ.
ಬಿಜೆಪಿಯ ಯಾವ ಶಾಸಕರೂ ಅನ್ಯ ಪಕ್ಷಗಳ ನಾಯಕರ ಸಂಪರ್ಕಕ್ಕೆ ಸಿಗದಂತೆ ತಡೆಯುವುದರ ಜತೆಗೆ ಎಲ್ಲರನ್ನೂ ಒಗ್ಗಟ್ಟಾಗಿ ಇಟ್ಟುಕೊಳ್ಳುವತ್ತ ನಾಯಕರು ಗಮನ ಹರಿಸಿದ್ದಾರೆ. ಜತೆಗೆ, ಅತೃಪ್ತ ಶಾಸಕರು ಕಲಾಪದಲ್ಲಿ ಪಾಲ್ಗೊಳ್ಳದಿರುವುದಾಗಿ ಪುನರುಚ್ಚರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ತುಸು ನಿರಾಳರಾದಂತಿದ್ದಾರೆ.
ಅನುಮತಿ ಪಡೆದು ತಮ್ಮ ಕ್ಷೇತ್ರಗಳಿಗೆ ತೆರಳಿದ್ದ ಕೆಲ ಶಾಸಕರು ಭಾನುವಾರ ಸಂಜೆ ಹೊತ್ತಿಗೆ ರೆಸಾರ್ಟ್‌ಗೆ ಮರಳಿದರು. ರೆಸಾರ್ಟ್‌ನಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಂಗಳೂರು ಹಾಗೂ ಸುತ್ತಮುತ್ತ ನೆಲೆಸಿರುವ ಶಾಸಕರನ್ನು ಹೊರತುಪಡಿಸಿ ಬಹುತೇಕ ಶಾಸಕರು ರೆಸಾರ್ಟ್‌ನಲ್ಲೇ ವಾಸ್ತವ್ಯ ಮುಂದುವರಿಸಿದ್ದಾರೆ.
ವಿಳಂಬ ಮಾಡಿದರೆ ಪ್ರಜಾತಂತ್ರಕ್ಕೆ ದ್ರೋಹ: ಸೋಮವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸುವ ಭರವಸೆಯನ್ನು ಮುಖ್ಯಮಂತ್ರಿ ಹಾಗೂ ವಿಧಾನಸಭಾಧ್ಯಕ್ಷರು ನೀಡಿದ್ದು, ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ವಿಳಂಬ ಮಾಡಿದರೆ ಪ್ರಜಾತಂತ್ರಕ್ಕೆ ದ್ರೋಹ ಮಾಡಿದಂತಾಗಲಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಡಾಲರ್ ಕಾಲೋನಿ ನಿವಾಸದ ಬಳಿ ಭಾನುವಾರ ಪ್ರತಿಕ್ರಿಯಿಸಿದ ಅವರು, ರಾಜೀನಾಮೆ ನೀಡಿರುವ ಶಾಸಕರನ್ನು ಸದನಕ್ಕೆ ಬರುವಂತೆ ಬಲವಂತ ಮಾಡಬಾರದು ಎಂದು ಈಗಾಗಲೇ ಸುಪ್ರೀಂಕೋರ್ಟ್ ಸೂಚಿಸಿದೆ. ರಾಜೀನಾಮೆ ಸಲ್ಲಿಸಿರುವ 15 ಶಾಸಕರು ವಿಧಾನಸಭೆ ಕಲಾಪಕ್ಕೆ ಹೋಗಬಹುದು, ಇಲ್ಲವೇ ಹೋಗದಿರಬಹುದು ಎಂದು ತಿಳಿಸಿದೆ. ಹಾಗಾಗಿ, ಕಾಂಗ್ರೆಸ್ ವಿಪ್ ಜಾರಿಗೊಳಿಸಿರೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.