Advertisement

ಕಾರವಾರ : ಉಸ್ತುವಾರಿ ಸಚಿವರ ಎದುರೇ ಬಿಜೆಪಿ ಶಾಸಕರುಗಳ ಜಟಾಪಟಿ

07:50 PM Feb 11, 2022 | Team Udayavani |

ಕಾರವಾರ : ಕಾರವಾರದ ಜಿಲ್ಲಾಧಿಕಾರಿ ಕಚೇರಿಯ ಸಭಾ ಭವನದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಕಾರವಾರ ಮತ್ತು ಕುಮಟಾ ಶಾಸಕರ ಮಧ್ಯೆ ಜಟಾಪಟಿ ನಡೆಯಿತು. ಇದನ್ನು ಜಿಲ್ಲಾಧಿಕಾರಿ, ಸಿಇಓ, ಎಸ್ಪಿ , ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ ಹಾಗೂ ಎಲ್ಲಾ ಇಲಾಖೆಯಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಣ್ಣಾರೆ ಕಂಡು, ಕಿವಿಯಾರೆ ಕೇಳಿಸಿಕೊಂಡರು. ಸಚಿವ ಹೆಬ್ಬಾರ , ಕಾರವಾರ ಶಾಸಕಿಯನ್ನು ಸಮಾಧಾನಿಸಿಲು ಯತ್ನಿಸಿದರೂ, ಸಹ ಶಾಸಕಿಯ ಕೋಪ ತಣ್ಣಗಾಗಲಿಲ್ಲ.

Advertisement

ಕೆಡಿಪಿ ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ್ ಹಾಗೂ ಕುಮಟಾ ಶಾಸಕ ದಿನಕರ ಶೆಟ್ಟಿ ನಡುವೆ ಅನುದಾನ ಬಿಡುಗಡೆಯ ಸಂಬಂಧ ಜಟಾಪಟಿ ಆರಂಭವಾಯಿತು. ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಯುತ್ತಿತ್ತು. ಆಗ ಶಾಸಕಿ ಕಾರವಾರ ಕ್ಷೇತ್ರಕ್ಕೆ ನೆರೆ, ಪ್ರವಾಹ ಪರಿಹಾರಕ್ಕೆ ಬಂದ ಹಣವೆಷ್ಟು ಎಂದು ಪ್ರಶ್ನಿಸಿದರು. ಹಾಗೂ ಹಾನಿಯಾದ ಪ್ರಮಾಣ ಎಷ್ಟು ಎಂದು ವಿವರ ಕೇಳಿದರು.

ಲೋಕೋಪಯೋಗಿ ಕಾರ್ಯನಿರ್ವಾಹಕ ಎಂಜಿನಿಯರ್ ಕಾರವಾರ ತಾಲೂಕಿನಲ್ಲಿ ಹಾನಿಯಾದದ್ದು ೧೦೦ ಕೋಟಿ. ಬಿಡುಗಡೆಯಾದದ್ದು 5 ಕೋಟಿ. ಈಗ 5 ಕೋಟಿಯಲ್ಲಿ ಬಹುತೇಕ ಕಾಮಗಾರಿ ಆರಂಭವಾಗಿವೆ ಎಂದರು. ಆಗ ಕೋಪಗೊಂಡ ಶಾಸಕಿ ರೂಪಾಲಿ ಪ್ರವಾಹ ಬಾರದ ಕುಮಟಾ ಹೊನ್ನಾವರ,ಭಟ್ಜಳಕ್ಕೆ 70  ಕೋಟಿ ನೀಡುತ್ತೀರಿ. ನೆರೆ ಬಂದು ಹಾನಿಯಾದ ಕಾರವಾರಕ್ಕೆ 5  ಕೋಟಿ ನೀಡುತ್ತೀರಿ. ನಾನು ಜನರಿಗೆ ಹೇಗೆ ಮುಖ ತೋರಿಸಲಿ ಎಂದು ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯನ್ನು ಪ್ರಶ್ನಿಸಿದರು.

ಹೀಗೆ ಶಾಸಕಿ ಹೇಳುತ್ತಿದ್ದಂತೆ , ಕೆಂಡಾಮಂಡಲವಾದ ಶಾಸಕ ದಿನಕರ ಶೆಟ್ಟಿ ನನ್ನ ಸುದ್ದಿಗೆ ಬರಬೇಡಿ. ನನ್ನ ಕ್ಷೇತ್ರದ ಬಗ್ಗೆ ಮಾತನಾಡಲು ನಿಮಗೆ ಹಕ್ಕಿಲ್ಲ. ನಿಮ್ಮದಷ್ಟೇ ನೀವು ನೋಡಿಕೊಳ್ಳಿ. ಹೀಗೆ ಮಾತನಾಡಿದರೆ ಪರಿಣಾಮ ನೆಟ್ಟಗಿರಲ್ಲ. ನೀವು ಹೆಣ್ಮಗಳು ಎಂದು ಸುಮ್ಮನಿದ್ದೇನೆ ಎಂದರು.

ಈ ಮಾತಿನಿಂದ ಮತ್ತಷ್ಟೂ ಕೆರಳಿದ ಶಾಸಕಿ ರೂಪಾಲಿ,” ನಾನು ಸತ್ಯ ಹೇಳಿದ್ದೆನೆ, ನನಗೆ ಮಾತನಾಡಲು ಹಕ್ಕಿದೆ. ಆದ ಅಸಮತೋಲನ ಹೇಳಿಕೊಳ್ಳಬೇಕಲ್ರಿ” ಎಂದರು. ಆದರೂ ಇಬ್ಬರು ಶಾಸಕರ ಕೋಪ ತಣಿಯಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪೂಜಾರಿ ಮೂಕರಾಗಿ ಇದನ್ನೆಲ್ಲಾ ನೋಡುತ್ತಿದ್ದರು. ಜಿಲ್ಲಾಧಿಕಾರಿ, ಎಸ್ಪಿ , ಸಿಇಓ ದಿಗ್ಭ್ರಾಂತರಾದರು. ಮಧ್ಯ ಪ್ರವೇಶಿಸಿದ ಸಚಿವ ಹೆಬ್ಬಾರ , ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು 15  ತಾಸಿನಲ್ಲಿ ಯಲ್ಲಾಪುರ ಅಂಕೋಲಾಕ್ಕೆ ಬಂದಿದ್ದಾರೆ. ನೆರ ಪರಿಹಾರವಾಗಿ 210 ಕೋಟಿ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ಹೆಮ್ಮೆಪಡಿ ಹಾಗೂ ಸಿಎಂ ಅವರನ್ನು ಅಭಿನಂದಿಸಿ ಎಂದರು. ಅಲ್ಲದೆ ಅಧಿಕಾರಿಗಳ ಮುಂದೆ ಹೀಗೆ ಜಗಳ ಮಾಡಬೇಡಿ. ಪ್ರವಾಸಿ ಮಂದಿರದಲ್ಲಿ ನಿಮ್ಮ ಅಳಲನ್ನು ಜಿಲ್ಲಾ ಉಸ್ತುವಾರಿಗೆ ಹೇಳಿಕೊಳ್ಳಿ ಎಂದು ಎಚ್ಚರಿಸಿದರು.

Advertisement

ಅದಕ್ಕೆ ಜಗ್ಗದ ಶಾಸಕ ” ಇದು ಸಭೆ. ಮುಚ್ಚುಮರೆಯಾಕೆ. ನನ್ನ ಬೇಡಿಕೆ ನಾನು ಕ್ಷೇತ್ರದ ಜನರ ಪರ ಇಟ್ಟಿದ್ದೇನೆ. ಇದು ಜಗಳವಲ್ಲ. ಚರ್ಚೆ” ಎಂದರು. ಕಳೆದ ಸಲ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು, ನದಿ ದಾಟಿ ತೆರಳದಂತಹ ಪರಿಸ್ಥಿತಿ ಇತ್ತು. ತೌಕ್ತೆ ಚಂಡಮಾರುತದ ಸಂದರ್ಭ ಹಾನಿಗೊಳಗಾದ ಪ್ರದೇಶದ ಪೈಕಿ ಕುಮಟಾಕ್ಕೆ ಮಾತ್ರ ಹೆಚ್ಚು ಅನುದಾನ ನೀಡಲಾಗಿದೆ. ಕಾರವಾರಕ್ಕೂ ತೌಖ್ತೆ ಬಂದಿತ್ತು. ಅದರ ಅಡಿ ಅನುದಾನ ನಮಗೆ ಬರಲಿಲ್ಲ ಎಂದರು.

ಆಗ ಮತ್ತೆ ಮಧ್ಯೆ ಪ್ರವೇಶಿಸಿದ ಶಾಸಕ ದಿನಕರ ಶೆಟ್ಟಿ ಅವರು ಸರಕಾರದಿಂದ ನೀವೂ ಕೋಟಿ ಕೋಟಿ ರೂ. ಅನುದಾನ ತರ್ತೀರಿ ಎಂದರು. ಅದು ನನ್ನ ಸ್ವಂತ ಕ್ಯಾಪ್ಯಾಸಿಟಿಯಿಂದ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ ಎಂದು ಶಾಸಕಿ ರೂಪಾಲಿ ಸಮಜಾಯಿಷಿ ಕೊಟ್ಟರು.

ಕೆಡಿಪಿ ಸಭೆಯಲ್ಲೂ ಗರಂ ವಾತಾವರಣ:

“ಹೆಸ್ಕಾಂ – ಗ್ರಾಮೀಣಾಭಿವೃದ್ಧಿ ಎಂಜಿನಿಯರ್ ರನ್ನು ತರಾಟೆಗೆ ತೆಗೆದುಕೊಂಡ ಸಚಿವ ಪೂಜಾರಿ

ಕಟ್ಟಕಡೆಯ ವ್ಯಕ್ತಿಯ ಮನೆಗೂ ವಿದ್ಯುತ್ ಸೌಲಭ್ಯ ದೊರೆಯಬೇಕೆಂಬ ಉದ್ದೇಶದಿಂದ ಬೆಳಕು ಯೋಜನೆಯನ್ನು ಹೊಸದಾಗಿ ಜಾರಿಗೆ ತರಲಾಗಿದ್ದು ಜಿಲ್ಲೆಯಲ್ಲಿ ಪ್ರತಿ ಮನೆಯಲ್ಲೂ ಕೂಡ ವಿದ್ಯುತ್ ಕಲ್ಪಿಸುವ ಕಾರ್ಯವಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಪಂಚಾಯತ್‌ನ ಕೆಡಿಪಿ ಸಭೆಯಲ್ಲಿ ವಿವಿದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಮಾತನಾಡಿದ ಅವರು ಹೆಸ್ಕಾಮ್ ಅಧಿಕಾರಿಗಳು ಪುಕ್ಕಟೆ ದಾನಕ್ಕೆ ನೀವೇನು ವಿದ್ಯುತ್ ಕೊಡುತ್ತಿಲ್ಲ. ಹಣ ಪಡೆದು ವಿದ್ಯುತ್ ಕೊಡುತ್ತೀರಿ. ನಿಮ್ಮದು ಸೇವೆಯಲ್ಲ, ವ್ಯವಹಾರ. ಹಾಗಾಗಿ ಜನರಿಗೆ ಸರಿಯಾಗಿ ವಿದ್ಯುತ್ ಪೂರೈಸಿ ಎಂದರು. ಮುಂದಿನ ಸಭೆಯೊಳಗಾಗಿ ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಮನೆಯೇ ಇಲ್ಲ ಎನ್ನುವಂತಹ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಜಿಲ್ಲೆಯಲ್ಲಿ ಬೆಳಕು ಯೋಜನೆಯಲ್ಲಿ ಎಷ್ಟು ಬೇಡಿಕೆಯಿದೆ ಎಂಬುದನ್ನು ಸರ್ವೇ ಮಾಡಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯ ವಿದ್ಯುತ್ ಸಮಸ್ಯೆಗಳಿದ್ದರೂ ಕೂಡ ಹೆಸ್ಕಾಂ ರವರೇ ಜವಾಬ್ದಾರರಾಗಿರುತ್ತಿರಿ. ಗೋಟೆಗಾಳಿ ಗ್ರಾಮದ ಬಿಸಿಎಮ್ ಹಾಸ್ಟೆಲ್‌ದಲ್ಲಿ ವಿದ್ಯುತ್ ಸಂಪರ್ಕ ವಿಲ್ಲವೆಂಬ ದೂರು ಇದ್ದು ಈ ಕುರಿತು ಹಿಂದುಳಿದ ವರ್ಗ ಇಲಾಖೆ ಹಾಗೂ ಹೆಸ್ಕಾಮ್ ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂದರು.

ಹಣ್ಣು ಹಂಪಲು ಪದಾರ್ಥಗಳಿಗೆ ರಾಸಾಯನಿಕ ಬಳಸಿ ಬಣ್ಣ ಬರುವಂತೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸಂಬಂಧ ಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕು. ಜಿಲ್ಲೆಯಲ್ಲಿ ನೀರಾ ಉತ್ಪಾದಿಸಲು ತೋಟಗಾರಿಕೆ ಇಲಾಖೆ ಅಧಿಕಾರಿ ಅಬಕಾರಿ ಇಲಾಖೆಯಿಂದ ಪರವಾನಿಗೆ ಬೇಕೆಂದು ಹೇಳುತ್ತಿರುವದರಿಂದ ನೆಪ ಹೇಳದೇ ಒಂದು ವಾರದೊಳಗೆ ಪರವಾನಿಗೆ ನೀಡುವ ಕೆಲಸವನ್ನು ಅಬಕಾರಿ ಇಲಾಖೆ ಮಾಡಬೇಕೆಂದರು.
ಇ- ಸ್ವತ್ತು ಸಮಸ್ಯೆ ಕೆಲವು ತಾಲೂಕುಗಳಲ್ಲಿ ಬಗೆಹರಿದಿರುವಂತಹ ವಾತಾವರಣ ಕಂಡು ಬಂದರೆ , ಕುಮಟಾ ತಾಲೂಕದಲ್ಲಿ ಇನ್ನೂ ಸಮಸ್ಯೆ ನಿವಾರಣೆ ಆಗದೇ ಜೀವಂತವಾಗಿದೆ, ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ ಎಂದು ಶಾಸಕ ದಿನಕರ್ ಶೆಟ್ಟಿ ದೂರಿದರು. ಒಂದು ರೂಪಾಯಿ ತೆಗೆದುಕೊಂಡಂತಹ ಭ್ರಷ್ಟಾಚಾರದ ದೂರು ಕೇಳಿ ಬಂದಲ್ಲಿ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು. ಇ- ಸ್ವತ್ತಿನಿಂದ ಜನರಿಗೆ ಸಮಸ್ಯೆಯಾಗಬಾರದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಒಂದೇ ರೀತಿ ನಿಯಮಗಳಡಿ ಇ-ಸ್ವತ್ತು ಪ್ರಕ್ರಿಯೆ ಸುಗಮವಾಗಿ ನಡೆಯಬೇಕೆಂದು ಸಚಿವ ಪೂಜಾರಿ ಎಚ್ಚರಿಸಿದರು.

ಜಿಲ್ಲೆಯ ಜನರಿಗೆ ಮರಳು ಸಿಗಬೇಕು. ಈ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮುಂದಿನ ಮೂರು ದಿನದಲ್ಲೇ ಕ್ರಮಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಕರ್ತವ್ಯಲೋಪದ ಮೇಲೆ ಅಮಾನತುಗೊಳಿಸಲಾಗುವದೆಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಮಾತನಾಡಿ, ಜಿಲ್ಲೆಗೆ ಸೂಪರ ಸ್ಪೆಶಲಿಸ್ಟ್ ಬ್ರಾಂಚ್‌ಗಳ ಅವಶ್ಯಕತೆ ಇರುತ್ತದೆ ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ಹುಬ್ಬಳ್ಳಿ ಅಥವಾ ಮಂಗಳೂರು ಹೋಗುವಷ್ಟರಲ್ಲಿ ವಿಳಂಬವಾಗಿ ಜೀವ ಹಾನಿ ಆಗುವುದರಿಂದ ಆದ್ಯತೆ ಮೇರೆಗೆ ಆರೋಗ್ಯ ಇಲಾಖೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದರು.

ಕಾರ್ಮಿಕ ಖಾತೆ ಸಚಿವ ಶಿವರಾಮ್ ಹೆಬ್ಬಾರ ಮಾತನಾಡಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್‌ವೆಲ್‌ಗಳನ್ನು ತೆಗೆಯುವ ಹಾಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಗುತ್ತಿಗೆಗಳನ್ನು ಬೇರೆಬೇರೆಯವರಿಗೆ ನೀಡುವುದರಿಂದ ಸಮಸ್ಯೆಯಾಗುತ್ತಿರುವುದರಿಂದ ಒಂದೇ ಗುತ್ತಿಗೆದಾರರಿಗೆ ನೀಡಬೇಕೆಂದಾಗ ಸಚಿವ ಪೂಜಾರಿ ಅವರು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಫಲಾನುಭವಿಗಳ ಖಾತೆಗೆ ನೇರ ಹಣ ಸಂದಾಯ ಮಾಡುವ ಮತ್ತು ಒಂದೇ ಎಜೆನ್ಸಿಯವರಿಗೆ ಟೆಂಡರ್ ನೀಡಬೇಕೆಂಬ ಯೋಚನೆ ಇದ್ದು, ಈ ಸಂಬಂಧ ಸಾಧಕ ಬಾಧಕ ಕುರಿತು ಚರ್ಚಿಸಿ ಕ್ರಮಕೈಗೊಳ್ಳಲಾಗುವುದೆಂದರು

ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ, ಎಮ್ ಎಲ್. ಸಿ ಗಳಾದ ಶಾಂತಾರಮ್ ಸಿದ್ದಿ, ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಸಿ ಇ ಒ ಪ್ರಿಯಾಂಗಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೆಕರ್ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next