Advertisement

ಪಕ್ಷ ತೊರೆಯುವುದಿಲ್ಲ ಎನ್ನುತ್ತಲೇ BJP ಶಾಸಕರು ಕಾಂಗ್ರೆಸ್‌ಗೆ?

11:27 PM Aug 18, 2023 | Team Udayavani |

ಬಿಜೆಪಿಯ ಕೆಲವು ಪ್ರಮುಖ ಶಾಸಕರು ಕಾಂಗ್ರೆಸ್‌ ಸೇರಲಿದ್ದಾರೆ ಎನ್ನುವ ಸುದ್ದಿಗೆ ರೆಕ್ಕೆಪುಕ್ಕ ಬಲಿಯತೊಡಗಿದೆ. ಇದು “ರಾಜ್ಯ ಸರಕಾರದ ವೈಫಲ್ಯ ಮರೆಮಾಚಲು ಕಾಂಗ್ರೆಸ್‌ ನಾಯಕರು ಎಬ್ಬಿಸಿ ರುವ ವದಂತಿಯಷ್ಟೇ’ ಎಂದು ಬಿಜೆಪಿ ಹಿರಿಯ ನಾಯಕರು ಸ್ಪಷ್ಟನೆ ನೀಡಿದ್ದಾರಾದರೂ, “ಪಕ್ಷ ಬಿಟ್ಟು ಹೋಗಿ ಬಿಜೆಪಿಯಿಂದ ಬೇಸತ್ತು ನಮ್ಮ ಪಕ್ಷದ ನಾಯಕತ್ವ ಮತ್ತು ಸಿದ್ಧಾಂತ ಒಪ್ಪಿ ಬರುವವರಿಗೆ ಬೇಡ ಎನ್ನೆವು’ ಎಂಬ ಮಾತೂ ಕಾಂಗ್ರೆಸ್‌ ಪಡಸಾಲೆಯಿಂದ ಕೇಳಿಬರುತ್ತಿರುವುದು “ಆಪರೇಷನ್‌ ಹಸ್ತ’ಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ರಾಜ್ಯ ರಾಜಕಾರಣದಲ್ಲಿ “ಹಸ್ತಾಂತರ’ ಗುಲ್ಲು ಹೆಚ್ಚುತ್ತಲೇ ಇದೆ.

Advertisement

ಕಾಂಗ್ರೆಸ್‌ಗೆ ಬಿಜೆಪಿ ಶಾಸಕರು ಹೋಗಲಾರರು
ಹುಬ್ಬಳ್ಳಿ: ನಾಯಕತ್ವ ಹಾಗೂ ಸಿದ್ಧಾಂತವಿಲ್ಲದ ಕಾಂಗ್ರೆಸ್‌ಗೆ ಯಾರೂ ಹೋ ಗಲು ಬಯಸುವುದಿಲ್ಲ. ಬಿಜೆ ಪಿಯ ಕೆಲವು ಶಾಸಕರು ಕಾಂಗ್ರೆಸ್‌ ಸೇರಲಿದ್ದಾರೆ ಎಂಬುದು ಸುಳ್ಳು. ಇದು ಸರ ಕಾರದ ವೈಫಲ್ಯವನ್ನು ಮರೆ ಮಾಚಲು ಕಾಂಗ್ರೆಸ್‌ ನಾಯಕರು ಹಬ್ಬಿಸಿರುವ ವದಂತಿ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಷಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಪ್ರಮುಖರೊಂದಿಗೆ ಚರ್ಚಿಸಿರುವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಜತೆ ಮಾತನಾಡಿರುವೆ. ಅಂಥ ಯಾವುದೇ ಬೆಳವಣಿಗೆ ಇಲ್ಲ ಎಂದು ಅವರು ತಿಳಿಸಿ ದ್ದಾರೆ. ಶಾಸಕರಾದ ಎಚ್‌.ಟಿ. ಸೋಮ ಶೇಖರ್‌, ಮುನಿರತ್ನ, ಶಿವರಾಮ ಹೆಬ್ಟಾರ್‌ ಅವರು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಮಾಜಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ನನ್ನೊಂದಿಗೆ ಸಾಕಷ್ಟು ಬಾರಿ ಮಾತನಾಡಿದ್ದು, ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ ಎಂದರು. ಸರಕಾರ ಹಣ ನೀಡುತ್ತಿಲ್ಲ ಮಳೆಯಿಂದ ರಸ್ತೆಗಳು ಹಾಳಾಗಿದ್ದು, ಗುಂಡಿ ಮುಚ್ಚಲೂ ಸರಕಾರ ಹಣ ನೀಡುತ್ತಿಲ್ಲ. ಅವರ ಪಕ್ಷದ ಶಾಸಕರೇ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಶಾಸಕ ಬಸವರಾಜ ರಾಯರಡ್ಡಿ ಅವರು ಸರಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಭಿನ್ನಮತೀಯ ಚಟುವಟಿಕೆಗಳು ಇನ್ನೂ ಭುಗಿಲೇಳಲಿವೆ ಎಂದರು.

ಕಾವೇರಿ ವಿಷಯದಲ್ಲಿ ರಾಜ್ಯದ ಹಿತಾಸಕ್ತಿ ಉಳಿಸಿಕೊಳ್ಳುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಮೂರು ತಿಂಗಳಲ್ಲಿ ಇವರ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಗ್ಯಾರಂಟಿ ಅನುಷ್ಠಾನ ವಿಚಾರದಲ್ಲಿ ಹಿಂದೇಟು ಹಾಕುತ್ತಿದೆ. ಹೆಚ್ಚಿನ ವಿದ್ಯುತ್‌ ಖರೀದಿಸಿದರೆ ಹಣ ನೀಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಲೋಡ್‌ ಶೆಡ್ಡಿಂಗ್‌ ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯ ದಿಂದ ನಮ್ಮ 20ಕ್ಕೂ ಹೆಚ್ಚು ಸಂಸದರು ಆಯ್ಕೆಯಾಗಲಿದ್ದಾರೆ. ನಾನು ಧಾರವಾಡ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ವದಂತಿಯನ್ನು ಕೆಲವರು ಹಬ್ಬಿಸುತ್ತಿದ್ದಾರೆ. ನಾನು ಕ್ಷೇತ್ರ ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಬಹುಮತದ ಸರಕಾರಕ್ಕೆ ಅನ್ಯ ಶಾಸಕರ ಅಗತ್ಯ ಇಲ್ಲ
ಬೆಳಗಾವಿ: ಕಾಂಗ್ರೆಸ್‌ನಲ್ಲಿ 135 ಶಾಸಕರಿದ್ದು, ಪಕ್ಷಕ್ಕೆ ಬೇರೆ ಶಾಸಕರ ಅಗತ್ಯ ಇಲ್ಲ. ಆದರೆ ಪಕ್ಷ ಬಿಟ್ಟು ಹೋಗಿ ಬಿಜೆಪಿಯಿಂದ ಬೇಸತ್ತು ಪಕ್ಷದ ನಾಯಕತ್ವಮತ್ತು ಸಿದ್ಧಾಂತ ವನ್ನು ಒಪ್ಪಿ ಬರುವ ವ‌ರನ್ನು ಬೇಡ ಎನ್ನುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

Advertisement

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾವ ಶಾಸಕರು ಬರುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಬರುತ್ತಾರೆ ಎನ್ನುವ ಮಾತಿದೆ. ನಮ್ಮಲ್ಲಿಂದ ಹೋದ ಕೆಲವರು ಬಳಿಕ ಅಸಮಾಧಾನ ವ್ಯಕ್ತಪಡಿಸಿದ್ದನ್ನು ನೋಡಿದ್ದೇನೆ. ಇದು ಸತ್ಯವಾಗಿದ್ದರೆ ಅವರು ಬಿಜೆಪಿ ಬಿಟ್ಟು ಬರಬಹುದು ಎಂದರು.
ಪಕ್ಷ ಬಿಟ್ಟು ಹೋದವರಲ್ಲಿ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ಆದರೆ ಅವರು ನಮ್ಮ ಅಧ್ಯಕ್ಷರನ್ನು ಸಂಪರ್ಕಿಸಿ ರಬಹುದು. ನಾವೇನೂ ಯಾವುದೇ ಆಪರೇಷನ್‌ ಮಾಡುತ್ತಿಲ್ಲ ಎಂದರು.

ಜೈಲಿಗೆ ಭೇಟಿ ನೀಡಿ ಪರಿಶೀಲನೆ
ಹಿಂಡಲಗಾ ಜೈಲಿನಲ್ಲಿ ಅಕ್ರಮ, ಕೈದಿಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ನಾನು ಕೇಳಿದ್ದೇನೆ. ಈ ಸಂಬಂಧ ಜೈಲಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಕಳೆದ ಬಾರಿ ನಾನು ಗೃಹ ಸಚಿವನಾಗಿದ್ದಾಗಲೂ ಹಿಂಡಲಗಾ ಜೈಲಿಗೆ ಭೇಟಿ ಕೊಟ್ಟಿದ್ದೆ. ಆಗ ಇಂತಹ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಈಗ ಇಂತಹ ಘಟನೆಗಳು ಹೊಸದಾಗಿ ಕೇಳಿಬರುತ್ತಿವೆ. ಸದ್ಯದಲ್ಲೇ ಭೇಟಿ ಕೊಟ್ಟು ಅಕ್ರಮಕ್ಕೆ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಜೈನಮುನಿ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಿಐಡಿ ತನಿಖೆ ನಡೆಯುತ್ತಿದೆ. ತನಿಖಾ ವಿಚಾರಗಳನ್ನು ಹೇಳಲಾಗದು ಎಂದರು.

ಸುಧಾಮ್‌ ದಾಸ್‌ ಬದಲು ದುಡಿದವರಿಗೆ ನೀಡಬಹುದಿತ್ತು ಸುಧಾಮ್‌ ದಾಸ್‌ ಅವರಿಗೆ ಪರಿಷತ್‌ ಟಿಕೆಟ್‌ ಕೊಟ್ಟಿದ್ದಕ್ಕೆ ಕೆಲವರು ಹೈಕಮಾಂ ಡ್‌ಗೆ ಪತ್ರ ಬರೆದಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ ಪಕ್ಷದಲ್ಲಿ ಅವರಿಗಿಂತ ಹೆಚ್ಚು ದುಡಿದವರು ಸಾಕಷ್ಟು ಜನರಿದ್ದು, ಹಾಗಾಗಿ ಅವರನ್ನು ಪರಿಗಣಿಸಬಹುದಿತ್ತು. ಆದರೆ ಅಂತಿಮವಾಗಿ ನಾವು ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರವನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದು ಹೇಳಿದರು.

15 ಮಂದಿ ಮಾಜಿ, ಹಾಲಿ ಶಾಸ ಕರು ಕಾಂಗ್ರೆಸ್‌ ಸೇರ್ಪಡೆ ಖಚಿತ
ಮೈಸೂರು: ಬಿಜೆಪಿ ಹಾಗೂ ಜೆಡಿಎಸ್‌ನಿಂದ ನಮ್ಮ ಪಕ್ಷಕ್ಕೆ ಸುಮಾರು 15 ಮಂದಿ ಮಾಜಿ ಹಾಗೂ ಹಾಲಿ ಶಾಸಕರು ಕಾಂಗ್ರೆಸ್‌ ಸೇರ್ಪಡೆಯಾಗುವುದು ಖಚಿತ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದ್ದಾರೆ. ಶುಕ್ರವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸುಮಾರು 10ರಿಂದ 15 ಮಂದಿ ಮಾಜಿ ಹಾಗೂ ಹಾಲಿ ಶಾಸಕರು ಕಾಂಗ್ರೆಸ್‌ ಸೇರಲು ಸಿದ್ಧರಿ¨ªಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲವೂ ಅಂತಿಮವಾಗಲಿದೆ. ಅವರ ಹೆಸರು ಈಗ ಹೇಳಲು ಸಾಧ್ಯ ವಿಲ್ಲ. ಅಂತೂ ಅವರು ನಮ್ಮ ಪಕ್ಷಕ್ಕೆ ಬರುವುದು ಖಚಿತ ಎಂದರು.

ನಮ್ಮ ಪಕ್ಷದ ಯಾವುದೇ ಶಾಸಕರು ಕಾಂಗ್ರೆಸ್‌ ಸೇರುವುದಿಲ್ಲ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಆಪರೇಷನ್‌ ಹಸ್ತ ನಡೆಯುತ್ತಿದೆ ಎಂದು ತಿಳಿದುಕೊಂಡಿದ್ದೇನೆ. ಶಾಸಕ ಎಸ್‌. ಟಿ.ಸೋಮಶೇಖರ್‌ ಅವರ ಜತೆ ಮಾತಾಡಿದ್ದೇನೆ. ಅವರು ಪಕ್ಷ ತೊರೆ ಯುವ ಯಾವುದೇ ಚಿಂತನೆ ಇಲ್ಲ ಎಂದು ಹೇಳಿದ್ದಾರೆ.
-ಟಿ.ಎಸ್‌. ಶ್ರೀವತ್ಸ, ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ

ಕಾಂಗ್ರೆಸ್‌ ಸೇರಲು ಬೇರೆ ಪಕ್ಷಗಳ ಪ್ರಮುಖ ನಾಯಕರೇ ಮುಂಚೂಣಿಯಲ್ಲಿದ್ದು, ಆಪರೇಶನ್‌ ಹಸ್ತ ಮಾಡುವ ಅನಿವಾರ್ಯತೆಯೇ ಇಲ್ಲ. ಮುಖಂಡರನ್ನು ಪಕ್ಷಕ್ಕೆ ಕರೆ ತರುವಂತೆ ನಮಗೆ ಯಾವುದೇ ಟಾಸ್ಕ್ ನೀಡಿಲ್ಲ. ಹಿಂದೆ ಕಾಂಗ್ರೆಸ್‌ ತೊರೆದು ಹೋದವರೇ ತಮ್ಮ ತಪ್ಪಿನ ಅರಿವಾಗಿ ಮರಳಿ ಬರುತ್ತಿರಬಹುದು.
-ಎನ್‌.ಎಸ್‌. ಬೋಸರಾಜು, ಸಚಿವ

ಕಾಂಗ್ರೆಸ್‌ಗೆ ಹೋಗುವವರು ಬುದ್ಧಿವಂತರೂ ಅಲ್ಲ, ರಾಜಕೀಯ ಜಾಣರೂ ಅಲ್ಲ: ಸಿ.ಟಿ.ರವಿ
ಮೈಸೂರು: ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಕ್ಕೆ ದುರ್ದೆಸೆ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಆ ಪಕ್ಷಕ್ಕೆ ಬೇರೆಯವರು ಹೋಗುತ್ತಾರಾ? ಯಾರಾದರೂ ಹೋದರೆ ಅಂಥವರನ್ನು ರಾಜಕೀಯ ಜಾಣ್ಮೆ ಇರುವವರು, ಬುದ್ಧಿವಂತರು ಎನ್ನಲಾಗದು. ಅವರಿಗೆ ದೂರಾಲೋಚನೆಯೂ ಇದೆ ಎನ್ನಲಾಗದು ಎಂದು ಮಾಜಿ ಶಾಸಕ ಸಿ.ಟಿ.ರವಿ ತಿಳಿಸಿದರು.

ಸರಕಾರ ಬಂದಾಗಿನಿಂದ ಅಲ್ಲಿನ ಹಿರಿಯ ಶಾಸಕರಿಗೇ ಸಮಾಧಾನ ಇಲ್ಲ. ಇಲ್ಲಿಂದ ಹೋದವರಿಗೆ ಏನು ಸಮಾಧಾನ ಸಿಗಲಿದೆ ಎಂದ ಅವರು, ಎಸ್‌.ಟಿ. ಸೋಮಶೇಖರ್‌ ಅವರ ಜತೆ ಮಾತನಾಡುತ್ತೇನೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next