ಇಂಡಿ: ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇರದಿದ್ದರಿಂದ ಶಾಸಕರು ಚುನಾವಣೆ ಎದುರಿಸುವುದು ಬೇಡ, ವಿರೋಧ ಪಕ್ಷದಲ್ಲಿರೋಣ ಎಂದಿದ್ದರು. ಬಿಜೆಪಿಯ ಮೂವರು ಸದಸ್ಯರು ಬಂದು ಕೈಕಾಲು ಹಿಡಿದು ಚುನಾವಣೆಯಲ್ಲಿ ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಕೇಳಿಕೊಂಡ ಪ್ರಯುಕ್ತ ಚುನಾವಣೆ ಕಣಕ್ಕಿಯಲಾಯಿತು ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.
ಶನಿವಾರ ಪಟ್ಟಣದ ಕಾಂಗ್ರೆಸ್ ಕಾರ್ಯಾಲ ಯದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಪುರಸಭೆಯಲ್ಲಿ ಕೇವಲ ಎಂಟು ಸ್ಥಾನ ಹೊಂದಿದ್ದು ಬಹುಮತ ವಿರಲಿಲ್ಲ. ಯಾರೂ 2ಎ ಮಹಿಳೆ ಮೀಸಲಾತಿಗೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಆಸಕ್ತಿ ಇರಲಿಲ್ಲ ಎಂದರು.
ಬಿಜೆಪಿ ಸದಸ್ಯರಾದ ದೇವೇಂದ್ರ ಕುಂಬಾರ, ಪಿಂಟು ರಾಠೊಡ, ವಿಜಯಕುಮಾರ ಮೂರಮನ ಶಾಸಕರ ಮನೆಗೆ ಬಂದು ಜೆಡಿಎಸ್‌ನ ಶೈಲಜಾ ಪೂಜಾರಿ ಮತ್ತು ಬಿಜೆಪಿಯ ಭಾಗಿರಥಿ ಕುಂಬಾರ ಇವರಿಗೆ ಮೊದಲ ಅವಧಿಗೆ 15 ತಿಂಗಳು ನಂತರ ಅವಧಿಗೆ 15 ತಿಂಗಳ ಷರತ್ತಿಗೆ ಒಪ್ಪಿಸಿದರು. ಶೈಲಜಾ ಅಧ್ಯಕ್ಷೆಯಾಗಿ, ಪಕ್ಷೇತರ ಇಸ್ಮಾಯಿಲ್ ಅರಬ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ನಂತರ ಅವಧಿಗೆ ಶೈಲಜಾ ಪೂಜಾರಿ ಕೊಟ್ಟ ಮಾತಿನಂತೆ ನಡೆದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಬಿಜೆಪಿಯ ಭಾಗಿರಥಿ ಕುಂಬಾರ ಅವರಿಗೆ ಅಧ್ಯಕ್ಷ ಸ್ಥಾನ ನೀಡಿ ಅವರಿಗೆ ಗೆಲ್ಲಿಸುವ ಪ್ರಕ್ರಿಯೆ ಆರಂಭವಾದಾಗ ಯಾರು ಮಾತುಕತೆ ಮಾಡಿ ಹೋಗಿದ್ದರೋ ಅವರೇ ಕೈ ಕೊಡತೊಡಗಿದರು. ಬಿಜೆಪಿಯ ಭೀಮನಗೌಡ ಪಾಟೀಲರು ಕೂಡ ಬೆಂಬಲ ಸೂಚಿಸುವದಾಗಿ ಅತಿ ನಿಷ್ಠೆಯಿಂದ ಹೇಳಿದ್ದರಿಂದ ಶಾಸಕರು ಅನಿವಾರ್ಯವಾಗಿ ಚುನಾವಣೆಗೆ ಮುಂದಾದರು. ಮಾತು ಕೊಟ್ಟರಂತೆ ಬಿಜೆಪಿ ಸದಸ್ಯರು ನಡೆದುಕೊಂಡಿಲ್ಲ. ಆದರೆ ಮಾತು ಉಳಿಸಿಕೊಳ್ಳಲು ಶಾಸಕರು ಶ್ರಮಿಸಿದ್ದಾರೆ ಎಂದರು.
ಶಾಸಕರನ್ನು ಮಾನಸಿಕವಾಗಿ ಕುಗ್ಗಿಸಲು ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಶಾಸಕರ ಹಿಂದೆ ಕ್ಷೇತ್ರದ ಜನರಿದ್ದಾರೆ. ಬಿಜೆಪಿಯವರ ಗೂಂಡಾವರ್ತನೆ ಜನರಿಗೆ ತಿಳಿಯುತ್ತಲಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿ ನೆಲಸಮವಾಗಲಿದೆ. ಸೋಲು ಗೆಲುವು ಎಲ್ಲರಿಗೂ ಇದ್ದದ್ದೆ, ಆದರೆ ಅದು ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆಯಿಂದ ಕೂಡಿರಬೇಕು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ಯಮನಾಜಿ ಸಾಳುಂಕೆ, ಭೀಮಣ್ಣ ಕವಲಗಿ, ಪ್ರಶಾಂತ ಕಾಳೆ, ಸದಾಶಿವ ಪ್ಯಾಟಿ, ನಿರ್ಮಲಾ ತಳಕೇರಿ, ಜಾವೀದ್ ಮೋಮಿನ್, ಆಯೂಬ ನಾಟೀಕಾರ, ಸತೀಶ ಕುಂಬಾರ, ತಾಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಬಿದರಕೋಟೆ, ಮುತ್ತಪ್ಪ ಪೋತೆ, ಅಪ್ಪು ಕಲ್ಲೂರ, ಮಹಾದೇವ ಗಡ್ಡದ, ಶ್ರೀಶೈಲ ಪೂಜಾರಿ ಮತ್ತಿತರರಿದ್ದರು.