ಬೆಂಗಳೂರು: ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿದ ಬೆನ್ನಲ್ಲೇ ಆಡಳಿತ ಪಕ್ಷದಿಂದ ಮಂಗಳವಾರ ಬೆಳಗ್ಗೆಯಷ್ಟೇ “ರಿವರ್ಸ್ ಆಪರೇಷನ್’ ಪ್ರಯತ್ನ ನಡೆಸಿರುವ ಬಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಿದ್ದು, ಯಾವುದೇ ಆಮಿಷಕ್ಕೆ ಒಳಗಾಗದೆ ಒಗ್ಗಟ್ಟಾಗಿ ಇರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.
ಶಾಸಕಾಂಗ ಪಕ್ಷ ಸಭೆಯಲ್ಲಿ ಶಿರಹಟ್ಟಿ ಶಾಸಕ ರಾಮಪ್ಪ ಲಮಾಣಿ ತಮ್ಮನ್ನು ಆಡಳಿತ ಪಕ್ಷಗಳ ಕೆಲವರು ಸೆಳೆಯಲು ಪ್ರಯತ್ನ ನಡೆಸಿದ ಬಗ್ಗೆ ಪ್ರಸ್ತಾಪಿಸಿದರು. ಕಾಂಗ್ರೆಸ್ ಶಾಸಕ ಭೀಮಾನಾಯ್ಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ ಅವರು ಮಂಗಳವಾರ ಬೆಳಗ್ಗೆ ತಮ್ಮನ್ನು ಸಂಪರ್ಕಿಸಿದರು. ಅವರ ಮಾತಿಗೆ ಸ್ಪಂದಿಸಲಿಲ್ಲ.
ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿದ್ದು, ಪಕ್ಷದಲ್ಲೇ ಮುಂದುವರಿಯುವುದಾಗಿ ರಾಮಪ್ಪ ಲಮಾಣಿ ತಿಳಿಸಿದರು ಎಂದು ಸಭೆಯಲ್ಲಿದ್ದ ನಾಯಕರೊಬ್ಬರು ಹೇಳಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿ.ಎಸ್.ಯಡಿಯೂರಪ್ಪ, ಈ ಬಗ್ಗೆ ಎಚ್ಚರದಿಂದ ಇರಬೇಕು. ಶಾಸಕರು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗಬಾರದು. ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಸೂಚಿಸಿದರು.
ಸ್ಪೀಕರ್ ನಡೆಗೆ ಅಪಸ್ವರ: ಶಾಸಕರ ರಾಜೀನಾಮೆ ಕುರಿತಂತೆ ಸ್ಪೀಕರ್ ನಡೆ ಬಗ್ಗೆಯೂ ಸಭೆಯಲ್ಲಿ ಅಪಸ್ವರ ವ್ಯಕ್ತವಾಯಿತು. ಶಾಸಕರು ಸಲ್ಲಿಸುವ ರಾಜೀನಾಮೆ ಪತ್ರದಲ್ಲಿ ದೋಷಗಳಿದ್ದರೆ, ಅದನ್ನು ಸರಿಪಡಿಸಿ ಅಂಗೀಕರಿಸಲು ಅವಕಾಶವಿದ್ದರೂ ಸ್ಪೀಕರ್ ಮತ್ತೂಮ್ಮೆ ರಾಜೀನಾಮೆ ಪತ್ರ ಸಲ್ಲಿಸಲು ಸೂಚಿಸಿರುವ ಕುರಿತು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.
ನಿಯಮಾನುಸಾರ ರಾಜೀನಾಮೆ ಅಂಗೀಕರಿಸದೆ ವಿಳಂಬ ಧೋರಣೆ ತೋರುತ್ತಿದ್ದು, ಇದರ ವಿರುದ್ಧ ದನಿ ಎತ್ತಬೇಕು ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಸಮ್ಮತಿಸದ ಯಡಿಯೂರಪ್ಪ, ಈ ರೀತಿ ಪ್ರಯತ್ನ ನಡೆಯಲ್ಲ ಎಂದು ಸಮಾಧಾನಪಡಿಸಿದರು ಎಂದು ಮೂಲಗಳು ಹೇಳಿವೆ.
ಶಾಸಕಾಂಗ ಸಭೆ ಮುಂದುವರಿಕೆ: ಮೈತ್ರಿ ಸರ್ಕಾರಕ್ಕೆ ಸಂಖ್ಯಾಬಲ ಕುಸಿತ ಜತೆಗೆ ವಿಧಾನಮಂಡಲ ಅಧಿವೇಶನವೂ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಶಾಸಕರನ್ನು ಬೆಂಗಳೂರಿನಲ್ಲೇ ಇರುವಂತೆ ಬಿಜೆಪಿ ನಾಯಕರು ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಇನ್ನೂ ಕೆಲವು ದಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಜೆ ಹೊತ್ತು ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ರಿವರ್ಸ್ ಆಪರೇಷನ್ ಭಯವಿಲ್ಲ: “ನಮ್ಮ ಪಕ್ಷದ ಶಾಸಕರ ಬಗ್ಗೆ ನಮಗೆ ವಿಶ್ವಾಸವಿದೆ. “ರಿವರ್ಸ್ ಆಪರೇಷನ್’ನ ಭಯವಿಲ್ಲ. ನಾವು ರೆಸಾರ್ಟ್‌ಗೆ ಕೂಡ ಹೋಗಿಲ್ಲ ‘ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.