ಕೋಲ್ಕತಾ: ಪಶ್ಚಿಮಬಂಗಾಳದ ಉಪಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸಿದ ಬೆನ್ನಲ್ಲೇ ಭಾರತೀಯ ಜನತಾ ಪಕ್ಷದ ಶಾಸಕ ಸೌಮೆನ್ ರಾಯ್ ಶನಿವಾರ (ಸೆಪ್ಟೆಂಬರ್ 04) ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ:ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನ: ಬ್ಯಾಡ್ಮಿಂಟನ್ ಫೈನಲ್ ಗೆದ್ದ ಪ್ರಮೋದ್
ಕಾಲಿಯಾಗಂಜ್ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ರಾಯ್ ಈ ಮೊದಲು ತೃಣಮೂಲ ಕಾಂಗ್ರೆಸ್ ಸದಸ್ಯರಾಗಿದ್ದರು. ಬಿಜೆಪಿ ಶಾಸಕ ಸೌಮೆನ್ ರಾಯ್ ಅವರು ಬಂಗಾಳ ಮತ್ತು ಉತ್ತರ ಬಂಗಾಳದ ಅಭಿವೃದ್ಧಿಗಾಗಿ ಮತ್ತೆ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ ಎಂದು ಟಿಎಂಸಿ ಮುಖಂಡ ಪಾರ್ಥ ಚಟರ್ಜಿ ತಿಳಿಸಿದ್ದಾರೆ.
ಪಶ್ಚಿಮಬಂಗಾಳದಲ್ಲಿ ಸೌಮೆನ್ ರಾಯ್ ಅವರು ಟಿಎಂಸಿ ಮರು ಸೇರ್ಪಡೆಯಾಗುವ ಮೂಲಕ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 71ಕ್ಕೆ ಇಳಿಕೆಯಾದಂತಾಗಿದೆ. ಕಳೆದ ನಾಲ್ಕು ವಾರಗಳಲ್ಲಿ ನಾಲ್ಕು ಮಂದಿ ಭಾರತೀಯ ಜನತಾ ಪಕ್ಷದ ಶಾಸಕರು ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ.
ಪಶ್ಚಿಮಬಂಗಾಳದ ಸಂಸೆರ್ ಗಂಜ್, ಜಾಂಗಿಪುರ್ ಮತ್ತು ಭಾಬನಿಪುರ್ ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 30ರಂದು ಉಪ ಚುನಾವಣೆ ನಡೆಯಲಿದೆ. ಅಕ್ಟೋಬರ್ 3ರಂದು ಮತಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.