ಹೈದರಾಬಾದ್: ಪ್ರವಾದಿ ಮುಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಭಾರತದ ಮೊದಲ ಹೈಡ್ರೋಜನ್ ಬಸ್ ಅನಾವರಣ; ಏನಿದು ಹೈಡ್ರೋಜನ್ ಬಸ್ಸು?
ಪ್ರವಾದಿ ಮುಹಮ್ಮದ್ ಕುರಿತು ನೀಡಿರುವ ಹೇಳಿಕೆಯ ವಿಡಿಯೋವನ್ನು ಶಾಸಕ ರಾಜಾ ಸಿಂಗ್ ಬಿಡುಗಡೆ ಮಾಡಿದ್ದ ನಂತರ ಹೈದರಾಬಾದ್ ನಲ್ಲಿ ಪ್ರತಿಭಟನೆ ನಡೆದಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು ಎಂದು ವರದಿ ವಿವರಿಸಿದೆ.
ನಗರ ಪೊಲೀಸ್ ಕಮಿಷನರ್ ಕಚೇರಿ ಮುಂಭಾಗ ಸೇರಿದಂತೆ ಹಲವೆಡೆ ಶಾಸಕ ರಾಜಾ ಸಿಂಗ್ ವಿರುದ್ಧ ಪ್ರತಿಭಟನೆ ನಡೆದಿದ್ದು, ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿರುವುದಾಗಿ ವರದಿ ಹೇಳಿದೆ.
ಪ್ರತಿಭಟನೆ ನಂತರ ಶಾಸಕ ರಾಜಾ ಸಿಂಗ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 153ಎ, 295, 505ರ ಅಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು ನಂತರ ಅವರನ್ನೆಲ್ಲಾ ವಿವಿಧ ಪೊಲೀಸ್ ಠಾಣೆಗಳಿಗೆ ಸ್ಥಳಾಂತರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.