Advertisement

ಶಾಸಕ ನಡಹಳ್ಳಿ ಜನಸೇವೆಗೆ ಮಠಾಧೀಶರ ಮೆಚ್ಚುಗೆ

12:27 AM Apr 29, 2020 | Hari Prasad |

ಮುದ್ದೇಬಿಹಾಳ: ಬಿಜೆಪಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರು ಕೋವಿಡ್ 19 ವೈರಸ್ ಸಂಕಷ್ಟ ಕಾಲದಲ್ಲಿ ಕಡುಬಡವರು, ಕೂಲಿ ಕಾರ್ಮಿಕರು, ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು, ವೈದ್ಯರು, ಪೊಲೀಸರು, ಪೌರಕಾರ್ಮಿಕರು, ಪತ್ರಿಕಾ ವಿತರಕರು ಸೇರಿ ಸಾವಿರಾರು ಮಂದಿಗೆ ಅಂದಾಜು ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಆಹಾರಧಾನ್ಯದ ಕಿಟ್‌ ಹಾಗೂ ಗುಣಮಟ್ಟದ ಮಾಸ್ಕ್ ಸೇರಿ ಅಗತ್ಯ ಸುರಕ್ಷಾ ಸಾಧನಗಳನ್ನು ಕಲ್ಪಿಸುತ್ತಿರುವುದಕ್ಕೆ ವಿವಿಧ ಮಠಾಧೀಶರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Advertisement

 


‘ಕಷ್ಟದ ಸಂದರ್ಭ ಜನಸೇವೆ ಮಾಡುವುದೇ ನಿಜವಾದ ದೇವರ ಪೂಜೆ. ಈ ದಿಸೆಯಲ್ಲಿ ಶಾಸಕ ನಡಹಳ್ಳಿ ಕಾರ್ಯ ಸಮಾಜ ಹಾಗೂ ಜನಪ್ರತಿನಿಧಿಗಳಿಗೆ ಮಾದರಿಯಾಗುವಂಥದ್ದು.  ಕೋವಿಡ್ 19 ವೈರಸ್ ತಡೆಗಟ್ಟುವಲ್ಲಿ ಆರೋಗ್ಯ ಸೈನಿಕರಿಗೆ ಮಾತ್ರವಲ್ಲದೆ ಬಡವರ ಹಸಿವನ್ನು ನೀಗಿಸಲು ಅವರು ನಡೆಸುತ್ತಿರುವ ದಾಸೋಹ ಕಾರ್ಯ ಹೀಗೆಯೇ ಮುಂದುವರಿಯಲಿ’ ಎಂದು ಕೂಡಲಸಂಗಮದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನುಡಿದಿದ್ದಾರೆ.


ಈ ನಾಡು ಕಂಡ ಜನಪರ ರಾಜಕಾರಣಿಗಳಲ್ಲಿ ಶಾಸಕ ನಡಹಳ್ಳಿ ಅವರೊಬ್ಬ ಅಪರೂಪದ ಜನಸೇವಕ ರಾಜಕಾರಣಿ. ಬಡವರು, ದೀನದಲಿತರ ಬಗೆಗಿನ ಅವರ ಕಾಳಜಿ, ಕನಿಕರ, ಮಮಕಾರ ಶ್ಲಾಘನೀಯ. ಕಷ್ಟದಲ್ಲಿರುವ ಬಡವರ ಹಸಿವು ನೀಗಿಸುವ ಕೆಲಸ ಮಾಡುತ್ತಿರುವ ಅವರಿಗೆ, ಅವರ ಕುಟುಂಬದವರಿಗೆ ಶಿವನ ಆಶೀರ್ವಾದವಿದೆ ಎಂದು ಯರಝರಿ ಯಲ್ಲಾಲಿಂಗೇಶ್ವರಮಠದ ಶ್ರೀ ಪ್ರಭು ಮಲ್ಲಾಲಿಂಗ ಸ್ವಾಮೀಜಿ ಹೇಳಿದ್ದಾರೆ.


ದಣಿದಾಗ ನೀರು, ಹಸಿವಾದಾಗ ಅನ್ನ ಕೊಡುವ ದಾಸೋಹಿ ಶಾಸಕ ನಡಹಳ್ಳಿ ಅವರ ನಿರಂತರ ಈ ಸೇವೆ ಅನ್ಯರಿಗೆ ಮಾದರಿ. ರಾಜಕಾರಣಕ್ಕೆ ಪಾದಾರ್ಪಣೆಗಿಂತ ಮುಂಚಿನಿಂದಲೂ ಬಡವರ ಏಳಿಗೆಗೆ ದುಡಿಯುತ್ತಿರುವ ಇಂಥವರು ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಅಗತ್ಯವಾಗಿದ್ದಾರೆ ಎಂದು ಕೆಸರಟ್ಟಿಯ ಘೋರತಪಸ್ವಿ ಶ್ರೀ ಶಂಕರಲಿಂಗ ಮಹಾಸ್ವಾಮೀಜಿ ಗುರುಪೀಠದ ಬಾಲತಪಸ್ವಿ ಶ್ರೀ ಸೋಮಲಿಂಗ ಮಹಾರಾಜರು ಹೇಳಿದ್ದಾರೆ.

Advertisement


ಉರಿ ಬಿಸಿಲು, ಕೋವಿಡ್ 19 ವೈರಸ್ ನ ಭೀತಿ ಲೆಕ್ಕಿಸದೆ ಪತ್ನಿ ಮಹಾದೇವಿ ಪಾಟೀಲ ಸಮೇತ ಎಲ್ಲೆಡೆ ತಾವೇ ಸಂಚರಿಸಿ, ಬಡವರ ಅಳಲು ಆಲಿಸಿ ಅವರ ಹಸಿವು ನೀಗಿಸುವಲ್ಲಿ ಅಳಿಲು ಸೇವೆ ಸಲ್ಲಿಸುತ್ತಿರುವ ಶಾಸಕ ನಡಹಳ್ಳಿ ಜನಪರ ಕಾರ್ಯ ಮಾದರಿಯಾದದ್ದು ಎಂದು ಹಿರೂರು ಅನ್ನದಾನೇಶ್ವರ ಸಂಸ್ಥಾನಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳು ತಿಳಿಸಿದ್ದಾರೆ.


ಶಾಸಕ ನಡಹಳ್ಳಿ ಅವರು ಜನರ ಸಂಕಷ್ಟ ಕಾಲದಲ್ಲಿ ಸದಾ ಸ್ಪಂದಿಸುತ್ತ ಸಹಾಯ ಹಸ್ತ ನೀಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಲಾಕ್ ‌ಡೌನ್‌ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ 20 ಸಾವಿರಕ್ಕೂ ಹೆಚ್ಚು ಬಡವರ ಹಸಿವು ತಣಿಸಲು ಮುಂದಾಗಿ ಅವರ ಕಣ್ಣೀರು ಒರೆಸುತ್ತಿರುವ ಕಾರ್ಯ ಶ್ಲಾಘನೀಯ. ಜನಸೇವೆಯೇ ಜನಾರ್ಧನನ ಸೇವೆ ಎಂದು ಭಾವಿಸಿ ಬಡವರಲ್ಲೇ ದೇವರನ್ನು ಕಾಣುತ್ತಿರುವ ಅವರ ಔದಾರ್ಯ, ಸಮಾಜ ಸೇವಾ ಕಾರ್ಯ ಸದಾ ಹೀಗೆಯೇ ಇರಲಿ ಎಂದು ಗುಂಡಕನಾಳ ಬೃಹನ್ಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ಹೇಳಿದ್ದಾರೆ.


ಕೋವಿಡ್ 19 ವೈರಸ್ ನಿಂದ ಸಂಕಷ್ಟಕ್ಕೆ ಒಳಗಾಗಿರುವವರ ಪರಿಸ್ಥಿತಿ ಅರಿತು ಅಂಥವರಿಗೆ ಸಹಾಯ ಮಾಡುವ ಗುಣ ಮೈಗೂಡಿಸಿಕೊಂಡಿರುವ ಶಾಸಕ ನಡಹಳ್ಳಿ ಅವರು ಅಪರೂಪದ ರಾಜಕಾರಣಿ ಎನ್ನಿಸಿಕೊಂಡಿದ್ದಾರೆ. ಈ ಸಂಕಷ್ಟ ಸ್ಥಿತಿಯಲ್ಲಿ ವೈಯಕ್ತಿಕವಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಾವೇ ಮನೆಮನೆಗೆ ಸಂಚರಿಸಿ ಆಹಾರ ಸಾಮಗ್ರಿ, ಸುರಕ್ಷಾ ಸಾಧನ ವಿತರಿಸಿದ್ದಾರೆ. ಈ ಮೂಲಕ ನಿಜವಾದ ಜನನಾಯಕ ಅನ್ನೋದನ್ನು ಸಾಬೀತುಪಡಿಸಿದಂತಾಗಿದೆ ಎಂದು ಬಸವನಬಾಗೇವಾಡಿ ಸಂಸ್ಥಾನ ಹಿರೇಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದಿದ್ದಾರೆ.


ತುಮಕೂರು ಸಿದ್ಧಗಂಗಾಮಠದಲ್ಲಿ ದಾಸೋಹದ ಶಿಕ್ಷಣ ಪಡೆದಿರುವ ಶಾಸಕ ನಡಹಳ್ಳಿ ಅವರು ಇಲ್ಲಿ ಅದನ್ನು ಹರಡುತ್ತಿದ್ದಾರೆ. ತಮ್ಮ ಗುರುಗಳ ಆಜ್ಞೆಯಂತೆ ನಿರಂತರ ದಾಸೋಹದಲ್ಲಿ ತೊಡಗಿಸಿಕೊಂಡು ಸಮಾಜದ ಏಳ್ಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ ಸಂದರ್ಭ ಯಾರೊಬ್ಬರೂ ಹಸಿವಿನಿಂದ ಇರಬಾರದೆನ್ನುವ ಅವರ ಕಳಕಳಿ ಮೆಚ್ಚುವಂಥದ್ದು.

ಹಸಿದ ಹೊಟ್ಟೆಗೆ ಅನ್ನ ನೀಡುವ ಮಹತ್ವದ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ತಮ್ಮ ಮನೆಗೆ ದಾಸೋಹ ನಿಲಯ ಎಂದೇ ನಾಮಕರಣ ಮಾಡಿ ಅದರಂತೆ ನಡೆದುಕೊಳ್ಳುತ್ತಿರುವ ಅವರು ಸಮಾಜಕ್ಕೆ ಮಾದರಿ ರಾಜಕಾರಣಿ ಎಂದು ಯಂಕಂಚಿ ಹಿರೇಮಠದ ಅಭಿನವ ಶ್ರೀ ರುದ್ರಮುನಿ ಶಿವಾಚಾರ್ಯರು ಅಭಿಪ್ರಾಯಪಟ್ಟಿದ್ದಾರೆ.


ರಾಜಕೀಯ ಕಾರಣಕ್ಕಾಗಿ ಸಹಾಯ ಮಾಡುವುದು ಸ್ವಾರ್ಥ ಎನ್ನಿಸಿಕೊಳ್ಳುತ್ತದೆ. ಕೋವಿಡ್ ಲಾಕ್ ಡೌನ್‌ನಂಥ ಸಂಕಷ್ಟ ಕಾಲದಲ್ಲಿ ಶಾಸಕ ನಡಹಳ್ಳಿ ಅವರು ಮಾಡುತ್ತಿರುವ ಸೇವೆ ಹೆಮ್ಮೆ ಪಡುವಂಥದ್ದು. ಸಿದ್ಧಗಂಗೆಯ ದಾಸೋಹ ಮಠದ ಪರಂಪರೆಯಲ್ಲಿ ಬೆಳೆದು ಬಂದಿರುವ ನಡಹಳ್ಳಿ ಅವರು ತಮ್ಮ ಧರ್ಮಪತ್ನಿ ಸಲಹೆ ಮೇರೆಗೆ ಬಡವರ ಹಸಿವು ನೀಗಿಸುವ ದಾಸೋಹ ಮಾಡುತ್ತಿರುವುದು ಒಳ್ಳೆಯ ವಿಚಾರ.

ಸಿದ್ಧಗಂಗಾ ಶ್ರೀ ಆಶೀರ್ವಾದದಿಂದ ಬೆಳೆದು ಬಂದಿರುವ ಅವರು ತಮ್ಮ ಮನೆಗೆ ದಾಸೋಹ ಎಂದು ಹೆಸರಿಟ್ಟಿರುವುದು ಸಾರ್ಥಕ. ಯಾರೂ ಹೊರಗಡೆ ಹೋಗದಂತಾಗಿರುವ ಇಂಥ ಸಂಕಷ್ಟ ಕಾಲದಲ್ಲಿ ಜನರ ಕೈ ಹಿಡಿಯುವ, ದಾಸೋಹ ನಡೆಸುತ್ತಿರುವ ಕಾರ್ಯ ಅತ್ಯಂತ ಒಳ್ಳೆಯದ್ದು ಎಂದು ಇಟಗಿ ಭೂಕೈಲಾಸ ಮೇಲಗದ್ದುಗೆ ಸಂಸ್ಥಾನ ಹಿರೇಮಠದ ಶ್ರೀ ಗುರು ಶಾಂತವೀರ ಶಿವಾಚಾರ್ಯರು ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆ ಶಾಸಕ ನಡಹಳ್ಳಿ ಅವರು ಪತ್ನಿ ಮಹಾದೇವಿ ಸಮೇತ ಜನತೆಯ ಮನೆ ಬಾಗಿಲಿಗೆ ತೆರಳಿ ಆಹಾರ ಧಾನ್ಯದ ಕಿಟ್‌ ವಿತರಣೆ ಜತೆಗೆ ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳ ತಿಳಿವಳಿಕೆ ಮೂಡಿಸಿರುವುದು ಜನಸೇವೆಗೆ ಮಾದರಿ ಎನ್ನಿಸಿಕೊಂಡಿದೆ.

— ಡಿ.ಬಿ.ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next